ಹೊಸ ವರ್ಷಕ್ಕೆಂದು ಕುಣಿದು ಕುಪ್ಪಳಿಸಲು ಕರ್ನಾಟಕ ಅದರಲ್ಲೂ ಬೆಂಗಳೂರಿನಿಂದ ಗೋವಾಗೆ ಹೋದವರು ರಾಜ್ಯಕ್ಕೆ ಕೊರೋನಾ ಸೋಂಕು ತಂದಿದ್ದಾರೆ. ಇದನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಸ್ಪಷ್ಟಪಡಿಸಿದ್ದು, ಹೊಸ ವರ್ಷದ ಪಾರ್ಟಿ ಸಲುವಾಗಿ ಹೋಗಿ ಬಂದವರೇ ಸೋಂಕಿತರಾಗುತ್ತಿದ್ದಾರೆ. ಸೋಂಕಿತರ ಪೈಕಿ ಅತೀ ಹೆಚ್ಚು ಅವರೇ ಇದ್ದಾರೆ ಅಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಂಕಿಗ ಒಳಗಾದವರ ಟ್ರಾವೆಲ್ ಹಿಸ್ಟರಿಯನ್ನು ಕೆದಕಿದಾಗ ಈ ವಿಷಯ ಬೆಳಕಿಗೆ ಬಂದಿದ್ದು, ಇದೇ ಕಾರಣದಿಂದ ಕರ್ನಾಟಕದ ಪಾಸಿಟಿವಿಟಿ ರೇಟ್ ಇಂದು ಶೇ3.12ಕ್ಕೆ ಏರಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಶೇ 2.59ರಷ್ಟಿತ್ತು.
ಈ ನಡುವೆ ಕರ್ನಾಟಕದಲ್ಲಿ ಸೋಂಕಿನ ಅಬ್ಬರ ತೀವ್ರವಾಗಿದ್ದು ಮಂಗಳವಾರ ಬೆಂಗಳೂರು ಒಂದರಲ್ಲೇ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿ ದಾಟಿದ್ದು 3049 ಮಂದಿಗೆ ಸೋಂಕು ತಗುಲಿದೆ. ಸೋಮವಾರ ಈ ಸಂಖ್ಯೆ 2053 ಆಗಿತ್ತು.
ಇನ್ನು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅವು ಹೀಗಿದೆ
ರಾಜಧಾನಿಯಲ್ಲಿ ಕೊರೋನಾ ಅಬ್ಬರ : ಶಾಲೆಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಬ್ಬರ ಏರುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಕೊರೋನಾ ಟಾಸ್ಕ್ ಫೋರ್ಸ್ ಸದಸ್ಯರು, ಸಚಿವರು ಹಾಗೂ ಅಧಿಕಾರಿಗಳು ಹಾಜರಿದ್ದ ಸಭೆ ಮೂರುವರೆ ಗಂಟೆಗಳ ಕಾಲ ನಡೆದಿದೆ.
ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಆಶೋಕ್ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ವಿವರಿಸಿದ್ದು, ಪ್ರಮುಖವಾಗಿ ಬೆಂಗಳೂರಿನಲ್ಲಿ 10 ರಿಂದ 12ನೇ ತರಗತಿ, ವೈದ್ಯಕೀಯ ಶಿಕ್ಷಣ, ಪ್ಯಾರ ಮೆಡಿಕಲ್, ನರ್ಸಿಂಗ್ ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಹೀಗಾಗಿ ಮುಂದಿನ ಎರಡು ವಾರಗಳ ಕಾಲ ಈ ತರಗತಿಗಳಿಗೆ ಆನ್ ಲೈನ್ ಪಾಠ ನಡೆಯಲಿದೆ.
ಇನ್ನು ಕೇರಳ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಪಶ್ಚಿಮಬಂಗಾಳದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ನಿಯಮಗಳನ್ನು ರಚಿಸಲಾಗಿದೆ. ಈ ನಿಯಮಗಳ ಪ್ರಕಾರ ಇದೇ ಶುಕ್ರವಾರದ ರಾತ್ರಿ 10 ರಿಂದ ಸೋಮವಾರ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಜೊತೆಗೆ ಹಿಂದಿನಂತೆ ನೈಟ್ ಕರ್ಫ್ಯೂ ಮುಂದುವರಿಯಲಿದ್ದು ರಾತ್ರಿ 10 ರಿಂದ ಬೆಳಗ್ಗೆ 5 ರಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಮುಂದಿನ ಎರಡು ವಾರಗಳ ಕಾಲ ರಾಜ್ಯಾದ್ಯಂತ ಜಾರಿಯಲ್ಲಿರಲಿದೆ.
ಬೆಂಗಳೂರಿನಲ್ಲಿ ಯಾವುದೇ ಸಾರ್ವಜನಿಕ ರಾಜಕೀಯ ಸಭೆ ಸಮಾರಂಭ, ಪ್ರತಿಭಟನೆ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ.
ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಭಾರತ ಸರ್ಕಾರದ ನಿಯಮದಂತೆ ಸಿಬ್ಬಂದಿ ಹಾಜರಾತಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಶೇ50ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ. ಇನ್ನು ಚಿತ್ರಮಂದಿರ, ಮಾಲ್, ಬಾರ್ ಪಬ್ ಕ್ಲಬ್, ಜಿಮ್ ಗಳಿಗೆ ಶೇ50ರ ಪ್ರವೇಶಕ್ಕೆ ಅನುಮತಿಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲೂ 50 ಮಂದಿಗೆ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಜಾತ್ರೆಗಳನ್ನು ನಡೆಸುವಂತಿಲ್ಲ. ಇನ್ನು ಮದುವೆ ಸೇರಿದಂತೆ ಕಾರ್ಯಕ್ರಮಗಳನ್ನು ಹೊರಾಂಗಣದಲ್ಲಿ ನಡೆಸುವುದಾದ್ರೆ 200 ಮಂದಿಗೆ ಅವಕಾಶ, ಒಳಾಂಗಣದಲ್ಲಿ ನೂರು ಜನಕ್ಕೆ ಅವಕಾಶ ನೀಡಲಾಗಿದೆ.
ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವವರು ಡಬಲ್ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.
Discussion about this post