ಗ್ರಾಹಕರು ಹೀಗೆ ಎಚ್ಚೆತುಕೊಂಡರೆ ಮಾರುವ ಕಂಪನಿಗಳು (Pai international) ಕೂಡಾ ಸರಿ ದಾರಿಗೆ ಬರುತ್ತದೆ
ಉಡುಪಿ : ತಾಂತ್ರಿಕ ದೋಷದ ಮಿಕ್ಸಿ ಮಾರಿ ಬಳಿಕ ಅದನ್ನು ಬದಲಾಯಿಸಿಕೊಡಲು ನಿರಾಕರಿಸಿದ ಉಡುಪಿಯ ಪೈ ಇಂಟರ್ನ್ಯಾಷನಲ್ ಸಂಸ್ಥೆಗೆ (Pai international) ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.
ಉಡುಪಿಯ ಉಪನ್ಯಾಸಕಿ ಅನಿತಾ ಎರಡು ವರ್ಷಗಳ ಹಿಂದೆ ಪೈ ಇಂಟರ್ನ್ಯಾಷನಲ್ ನಲ್ಲಿ 4,239 ರೂ.ಗಳನ್ನು ನೀಡಿ ಪ್ರೀತಿ ಮಿಕ್ಸಿ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ಅದು ಕೈ ಕೊಟ್ಟಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮಿಕ್ಸಿ ಬದಲಾಯಿಸಿಕೊಡುವಂತೆ ಉಡುಪಿಯ ಪೈ ಇಂಟರ್ನ್ಯಾಷನಲ್ ಗೆ ಮನವಿ ಮಾಡಿದ್ದರು. ಆದರೆ ಬದಲಾಯಿಸಿಕೊಡಲು ನಿರಾಕರಿಸಿದ ಅವರು ರಿಪೇರಿ ಮಾಡಿಕೊಟ್ಟಿದ್ದರು.
ಇದನ್ನು ಓದಿ : Sonu gowda ವೈರಲ್ ವಿಡಿಯೋ ರಹಸ್ಯ : ಬಿಗ್ ಬಾಸ್ ಮನೆಯಲ್ಲಿ iphone 12 ಕಥೆ
ರಿಪೇರಿ ಮಾಡಿದ ಬಳಿಕವೂ ಅದೇ ರಾಗ ಅದೇ ಹಾಡು, ಮಿಕ್ಸಿ ರುಬ್ಬುವ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಮತ್ತೆ ಪೈ ಮೆಟ್ಟಿಲು ಹತ್ತಿದ್ರೆ ಅವರದ್ದೂ ಕೂಡಾ ಅದೇ ರಾಗ ಅದೇ ಹಾಡು. ರಿಪೇರಿ ಮಾಡಿಕೊಡುತ್ತೇವೆ ಅನ್ನುವ ರೆಕಾರ್ಡ್ ಡೈಲಾಗ್ ಹೊಡೆಯುತ್ತಿದ್ರು.
ಈ ವರ್ತನೆಯಿಂದ ರೋಸಿ ಹೋದ ಅನಿತಾ ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಒತ್ತಾಯಿಸಿದರು. ಆದರೆ ಪೈ ಸಂಸ್ಥೆ ಜಗ್ಗಲಿಲ್ಲ. ಹೀಗಾಗಿ ಗ್ರಾಹಕಿ ಅನಿತಾ ಅವರು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ ಇಂಟರ್ ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ.ವಿರುದ್ಧ ದಾವೆ ಹೂಡಿದರು.
ಗ್ರಾಹಕಿಯ ದೂರಿನ ಪರಿಶೀಲಿಸಿದ ಜಿಲ್ಲಾ ಗ್ರಾಹಕರ ಆಯೋಗ ಖರೀದಿಸಿದ್ದ ಮಿಕ್ಸಿಯ ದರ, ಅದರ ಬಡ್ಡಿಯ ಮೊತ್ತ, ಅವರ ಕೆಲಸದಲ್ಲಾದ ತೊಂದರೆ, ಮಾನಸಿಕ ಮತ್ತು ದೈಹಿಕ ಶ್ರಮ, ಓಡಾಟದ ಖರ್ಚು ಕೋರ್ಟ್ ವ್ಯವಹಾರದ ವೆಚ್ಚ ಹೀಗೆ ಒಟ್ಟು 20,189 ರೂ.ಗಳನ್ನು ಗ್ರಾಹಕಿಗೆ ನೀಡಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ಮಾಸರೆಡ್ಡಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣ ದಾಖಲಿಸಲು ಅನಿತ ಅವರಿಗೆ ಉಪನ್ಯಾಸಕಿ ಸುಜಾತಾ ಸುಧೀರ್, ನ್ಯಾಯವಾದಿಗಳಾದ ವಿದ್ಯಾ ಭಟ್, ಅಂಜಲಿನ್, ಜಯಶ್ರೀ ಶೆಟ್ಟಿ ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬ್ಬಂದಿ ಸಹಕಾರ ನೀಡಿದ್ದರು.
ಉಪನ್ಯಾಸಕಿಯವರ ಈ ಕಾರ್ಯ ಎಲ್ಲಾ ಗ್ರಾಹಕರಿಗೆ ಮಾದರಿಯಾಗಬೇಕಾಗಿದೆ. ಗ್ರಾಹಕರ ಹಕ್ಕುಗಳು ಕಸಿಯುತ್ತಿರುವ ಕಂಪನಿಗಳ ವಿರುದ್ಧ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ.
Discussion about this post