ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ನಂಬರ್ ವನ್ ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಅಷ್ಟು ಮಾತ್ರವಲ್ಲದೆ ಕೊರೋನಾ ನಿಯಂತ್ರಿಸಲು ಕಾನೂನು ಎಷ್ಟು ಬಳಕೆಯಾಗುತ್ತಿದೆ ಅನ್ನುವುದಕ್ಕೆ ಸಂಗ್ರಹವಾಗುತ್ತಿರುವ ದಂಡವೇ ಸಾಕ್ಷಿ. ಮಾನವೀಯತೆಯನ್ನು ಮರೆತು ಮಾಸ್ಕ್, ಹಾಕದವರ ವಿರುದ್ಧ, ಕೊರೋನಾ ಕರ್ಫ್ಯೂ ಉಲ್ಲಂಘಿಸಿದವರಿಂದ ಬಲವಂತವಾಗಿ ಕಾಸು ವಸೂಲಿ ಮಾಡಲಾಗುತ್ತಿದೆ.
ಆದರೆ ಮೊನ್ನೆ ಮೊನ್ನೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ ವೇಳೆ ಒಂದು ರೂಪಾಯಿ ದಂಡ ವಸೂಲಿ ಮಾಡಲಿಲ್ಲ. ಅಷ್ಟೇ ಯಾಕೆ ಬಿಜೆಪಿಯ ನಾಯಕರು ಜಾತ್ರೆ, ಸಮಾವೇಶ ಎಂದು ಜನ ಸೇರಿಸಿದಾಗ್ಲೂ ಕೇಸು ಜಡಿಯಲಿಲ್ಲ, ದಂಡ ಪೀಕಿಸಲಿಲ್ಲ. ಅದೇ ಜನ ಸಾಮಾನ್ಯನೊಬ್ಬನ ಮೂಗಿನಿಂದ ಅರಿವಿಲ್ಲದೆ ಮಾಸ್ಕ್ ಜಾರಿದ್ರೆ ಸಾಕು, ಅಡ್ಡ ಹಾಕಿ ಫೈನ್ ಜಡಿಯುತ್ತಾರೆ. ಅಗತ್ಯ ವಸ್ತುಗಳ ಖರೀದಿಗೆಂದು ಮಾರುಕಟ್ಟೆಗೆ ಬಂದ ವೃದ್ಧರೊಬ್ಬರನ್ನು ಕಳೆದ ವಾರ ಪೊಲೀಸರು ಆಡಿಸಿದ ರೀತಿ ನೋಡಿದ್ರೆ ಕರುಳು ಚುರುಕ್ ಅನ್ನುತ್ತದೆ.
ಆದರೆ ಗುರುವಾರ ಮಾನ್ಯ ಗೃಹಸಚಿವರು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಅಂದ್ರೆ ಏನು ಅಂತಾ ಹುಡುಕಬೇಕಿತ್ತು. ಸಾಮಾಜಿಕ ಅಂತರಕ್ಕೆ ಬೆಂಕಿ ಬೀಳಲಿ, ಮಾಸ್ಕ್ ಅದ್ಯಾವ ರಾಜಕೀಯ ಮುಖಂಡರ ಮೂತಿಯಲ್ಲೂ ಇರಲಿಲ್ಲ. ಜಮೀರ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮಾಸ್ಕ್ ಹಾಕಿದ್ರೆ ಎಲ್ಲಿ ಕ್ಯಾಮಾರದಲ್ಲಿ ಮುಖ ಮರೆಯಾಗುತ್ತದೋ ಎಂದು ಕೊರೋನಾ ನಿಯಮಗಳಿಗೆ ಗೋಲಿ ಹೊಡೆದಿದ್ದರು.
ಕೊನೆಗೆ ಅದ್ಯಾರೋ ಪುಣ್ಯಾತ್ಮರು ಮಾಸ್ಕ್ ಮಾಸ್ಕ್ ಎಂದು ಪಿಸುಗುಟ್ಟಿದ್ದ ಮೇಲೆ ರಾಜಕೀಯ ನೇತಾರರು ಮಾಸ್ಕ್ ಏರಿಸಿಕೊಂಡಿದ್ದಾರೆ. ಹಾಗಾದ್ರೆ ಇವರ ಮೇಲೆ ದಂಡ ಹಾಕೋ ತಾಕತ್ತು ಮಾರ್ಷಲ್ ಗಳಿಗೆ ಇಲ್ವ. ಅವರಿಗೆ ಟಾರ್ಗೇಟ್ ಏನಿದ್ರೂ ಜನ ಸಾಮಾನ್ಯರು ಮಾತ್ರ. ದುಡಿದು ತಿನ್ನುವ ಮಂದಿಯೇ ಅದ್ಯಾಕೆ ದಂಡ ಕಟ್ಟಬೇಕು.
Discussion about this post