ಕೇರಳ : ಕೊರೋನಾ ನಿಯಂತ್ರಣ ವಿಚಾರದಲ್ಲಿ ಭಾರತದ ಮಾಡೆಲ್ ಆಗಬೇಕು ಎಂದು ಬಿಂಬಿಸಿಕೊಂಡಿದ್ದ ಕೇರಳ ಇಗ ಕೊರೋನಾ ಸೋಂಕು ನಿಯಂತ್ರಿಸಲು ಪರದಾಡುತ್ತಿದೆ. ಸ್ವಯಂಕೃತ ಅಪರಾಧಗಳ ಕಾರಣಗಳಿಂದ ಇದೀಗ ದೇವರನಾಡಿನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಮಾತ್ರವಲ್ಲದೆ ಅಕ್ಕ ಪಕ್ಕದ ರಾಜ್ಯಗಳಿಗೂ ಇದು ಕಂಟಕವಾಗಿ ಪರಿಣಮಿಸಿದೆ.
ಈ ನಡುವೆ ಇದೀಗ ಕೇರಳದಲ್ಲಿ ನಿಪಾ ವೈರಸ್ ಕಾಣಿಸಿಕೊಂಡಿದೆ. ನಿಪಾ ವೈರಸ್ ಗೆ 12 ವರ್ಷದ ಬಾಲಕನೊಬ್ಬ ಬಲಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರಿಗೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇದೀಗ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಾಲಕನ ಸಂಪರ್ಕದಲ್ಲಿ 188 ಜನರಿದ್ದರು ಎಂದು ಗುರುತಿಸಲಾಗಿದ್ದು, ಈ ಪೈಕಿ ಹೆಚ್ಚು ಅಪಾಯದ ಭೀತಿಯಲ್ಲಿರುವ 20 ಜನರನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ಸಾವಿನ ಬೆನ್ನಲ್ಲೇ ಸೋಂಕು ನಿಯಂತ್ರಣ ಸಲುವಾಗಿ ಹಲವು ಕ್ರಮಗಳನ್ನು ಪ್ರಕಟಿಸಲಾಗಿದ್ದು, ಬಾಲಕನ ಮನೆಯ ಸುತ್ತಲಿನ 3ಕಿಮೀ ಪ್ರದೇಶವನ್ನು ಬಂದ್ ಮಾಡಲಾಗಿದೆ. ಅಕ್ಕ ಪಕ್ಕದ ವಾರ್ಡ್ ಗಳನ್ನು ಲಾಕ್ ಮಾಡಲಾಗಿದೆ. ಇನ್ನು ಕಲ್ಲಿಕೋಟೆಯ ಜಿಲ್ಲೆ ಮಾತ್ರವಲ್ಲದೆ ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳನ್ನೂ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕಳೆದ ಬಾರಿ ನಿಪಾ ಕಾಣಿಸಿಕೊಂಡ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಶೈಲಜಾ ಟೀಚರ್ ಅದ್ಭುತವಾಗಿ ಅದನ್ನು ನಿಭಾಯಿಸಿದ್ದರು. ಆದರೆ ಕೇರಳದ ನೂತನ ಆರೋಗ್ಯ ಸಚಿವೆ ಇದನ್ನು ನಿಭಾಯಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕೇಂದ್ರ ಸರ್ಕಾರ ಸಾಂಕ್ರಾಮಿಕ ರೋಗ ತಜ್ಞರ ತಂಡವೊಂದನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ.
ಸೋಂಕು ಹರಡುವುದು ಹೇಗೆ..?
ಸೋಂಕಿಗೆ ತುತ್ತಾಗಿರುವ ಬಾವಲಿಗಳು ತಿಂದ ಹಣ್ಣನ್ನು ಅನ್ಯ ಪ್ರಾಣಿಗಳು ಅಥವಾ ಮನುಷ್ಯರು ತಿಂದರೆ ನಿಪಾ ವೈರಸ್ ಅಂಟಿಕೊಳ್ಳುತ್ತದೆ. ಬಳಿಕ ಜೊಲ್ಲು ಮತ್ತು ಉಗುಳಿನ ಮೂಲಕ ಹರಡುತ್ತದೆ.
ರೋಗ ಲಕ್ಷಣಗಳೇನು..?
ಜ್ವರ, ಉಸಿರಾಟ ಸಮಸ್ಯೆ, ತಲೆನೋವು, ಮೈಕೈ ನೋವು, ವಾಂತಿ, ಗಂಟಲು ಉರಿ, ಮಂಪರು. ಶೀಘ್ರವಾಗಿ ಚಿಕಿತ್ಸೆ ನೀಡಿದರೆ ಇದು ಪ್ರಾಣಕ್ಕೆ ಅಪಾಯ ತರುವುದಿಲ್ಲ.5 ರಿಂದ 14 ದಿನಗಳ ಕಾಲ ಮನುಷ್ಯರ ದೇಹದಲ್ಲಿ ಈ ಸೋಂಕು ಇರುತ್ತದೆ. ಶೀಘ್ರದಲ್ಲೇ ರೋಗ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಅಪಾಯವಿರುವುದಿಲ್ಲ.
ವೈರಸ್ ನಿಂದ ರಕ್ಷಣೆ ಹೇಗೆ..?
ಪಕ್ಷಿಗಳು, ಪ್ರಾಣಿಗಳು ತಿಂದ ಹಣ್ಣುಗಳನ್ನು ಸೇವಿಸದಿರುವುದು ಎಂದಿಗೂ ಉತ್ತಮ. ಜೊತೆಗೆಆಗಾಗ ಸೋಪಿನಿಂದ ಕೈಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯ ಅಭ್ಯಾಸ
ನಿಪಾ ಇತಿಹಾಸ
ನಿಪಾ ವೈರಸ್ 1999ರಲ್ಲಿ ಮೊದಲ ಸಲ ಮಲೇಷಿಯಾದಲ್ಲಿ ಕಾಣಿಸಿಕೊಂಡಿತ್ತು. ಆಗ 60 ಮಂದಿ ಬಲಿಯಾಗಿದ್ದರು. 2001ರಲ್ಲಿ ಭಾರತದ ಬಂಗಾಳದಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಆಗ 45 ಮಂದಿ ಮೃತಪಟ್ಟಿದ್ದರು. ಬಳಿಕ 2018ರಲ್ಲಿ ಕೇರಳದಲ್ಲಿ ನಿಪಾ ಕಾಣಿಸಿಕೊಂಡಿತ್ತು ಆಗ 17 ಮಂದಿ ಮೃತಪಟ್ಟಿದ್ದರು.
Discussion about this post