ನವದೆಹಲಿ : ಹೊಸ ಶಿಕ್ಷಣ ನೀತಿಗೆ ಒಂದು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ಭಾಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ಬಂದಾಗಿನಿಂದ ಕಳೆದ ಒಂದು ವರ್ಷದಲ್ಲಿ ತಮ್ಮ ಸರ್ಕಾರ ಸಾಧಿಸಿದ್ದೇನು ಅನ್ನುವ ಕುರಿತಂತೆ ಬೆಳಕು ಚೆಲ್ಲಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಧರ್ಮೇಂದ್ರ ಪ್ರಧಾನ್ NEP ಜಾರಿಯಿಂದ ಸಾಕಷ್ಟು ಸುಧಾರಣೆಗಳನ್ನು ಶಿಕ್ಷಣ ಕ್ಷೇತ್ರ ಕಂಡಿದೆ ಅಂದಿದ್ದಾರೆ. ಕಲಿಕೆಯ ಚಿತ್ರಣವನ್ನೇ ಬದಲಾಯಿಸಲು, ಶಿಕ್ಷಣವನ್ನು ಸಮಗ್ರವಾಗಿಸಿ ಸ್ವಾವಲಂಬಿ ಭಾರತ ಕಟ್ಟಲು ಗಟ್ಟಿ ಅಡಿಪಾಯ ಹಾಕಲು ರಾಷ್ಟ್ರೀಯ ಶಿಕ್ಷಣ ನೀತಿ-2020 ಸಹಕಾರಿ ಅನ್ನುವುದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತು.
ಆದರೆ ಕೇಂದ್ರ ಮಹತ್ವಾಕಾಂಕ್ಷೆಯಿಂದ ಶಿಕ್ಷಣ ನೀತಿ ಘೋಷಣೆಯಾಗಿ ಒಂದು ವರ್ಷ ಕಳೆದರೂ ಇದರ ಜಾರಿ ಸರಿಯಾಗಿ ಆಗಿಲ್ಲ. ಕೊರೋನಾ ಕಾರಣದಿಂದ ಇದರಲ್ಲಿ ವಿಳಂಭವಾಗಿದೆ ಅನ್ನುವುದು ಕೇಂದ್ರದ ವಾದ. ಆದರೆ ನಿಜವಾದ ಕಾರಣವೇ ಬೇರೆಯದ್ದಾಗಿದ್ದು, ಹಲವು ರಾಜ್ಯಗಳು ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾಗಿರುವ ಭಾಷಾ ನೀತಿಯ ಬಗ್ಗೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ನೀತಿ ಜಾರಿ ವಿಳಂಬವಾಗಿದೆ. ಜೊತೆಗೆ ಈಗ ರಾಜ್ಯ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಿಕ್ಷಣವನ್ನು ಮತ್ತು ವಿವಿಧ ಮಂಡಳಿಗಳು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿವೆ.ಆದರೆ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣದ ಮೇಲ್ವಿಚಾರಣೆ ನೋಡಿಕೊಳ್ಳುವುದು ಯಾರು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ. ಹೀಗೆ ಹಲವು ಗೊಂದಲಗಳು ಈ ನಿಯಮದಲ್ಲಿದ್ದು ಇದೇ ಕಾರಣದಿಂದ ಜಾರಿ ವಿಳಂಭವಾಗಿದೆ.
ಜೊತೆಗೆ ಈ ನೀತಿಯಿಂದ ಆಯಾ ರಾಜ್ಯದ ಸಂಸ್ಕೃತಿಗೆ ಮಾರಕವಾಗಲಿದೆ, ರಾಜ್ಯದ ಸಂಸ್ಕೃತಿ ಪ್ರಕಾರ ಪಠ್ಯಕ್ರಮ ಹಾಗೂ ಬೋಧನಾಕ್ರಮವನ್ನು ರೂಪಿಸಬೇಕು ಅನ್ನುವುದು ತಜ್ಞರ ವಾದ.
ರಾಷ್ಟ್ರೀಯ ಶಿಕ್ಷಣ ನೀತಿಯ ಹೈಲೈಟ್ಸ್
- ವಿದ್ಯಾರ್ಥಿಯು ಇಂತಹದ್ದೇ ಭಾಷೆ ಕಲಿಯಬೇಕು ಎಂಬ ಹೇರಿಕೆ ಇಲ್ಲ. ಮಾಧ್ಯಮಿಕ ಹಂತದಲ್ಲಿ ಮಕ್ಕಳಿಗೆ ವಿದೇಶಿ ಭಾಷೆ ಕಲಿಯಲು ಅವಕಾಶ
- 5ನೇ ತರಗತಿಯವರೆಗೆ ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಬೋಧನಾ ಮಾಧ್ಯಮ
- ಈಗಿರುವ 10+2 ರಚನೆಯ ಬದಲಾಗಿ, 5 + 3 + 3 + 4 ರಚನೆಯ ಪ್ರಸ್ತಾಪಿಸಲಾಗಿದೆ. ಈ ಪ್ರಕಾರ ಪ್ರಾಥಮಿಕ ಶಿಕ್ಷಣ 3ನೇ ವರ್ಷದಿಂದ ಆರಂಭ
- ಶಾಲಾ ಅವಧಿಯಲ್ಲೇ ವೃತ್ತಿಪರ ಶಿಕ್ಷಣ. 6ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣ ಪ್ರಾರಂಭ
Discussion about this post