ಜಗತ್ತಿಗೆಲ್ಲಾ ಕೊರೋನಾ ವೈರಸ್ ಹಂಚಿದ ಚೀನಾದಲ್ಲಿ ಇದೀಗ ಮತ್ತೊಂದು ಹೊಸ ಸೋಂಕು ಚೀನಾದಲ್ಲಿ ಕಾಣಿಸಿಕೊಂಡಿದೆ. ಹಾಗೆ ನೋಡಿದರೆ ಇದು ಹೊಸ ಸೋಂಕಲ್ಲ, ಹಲವು ವರ್ಷಗಳ ಹಿಂದೆ ಈ ಸೋಂಕು ಚೀನಾದಲ್ಲಿ ಕಾಣಿಸಿಕೊಂಡಿತ್ತು. ಆದರೆ ಸದ್ದಿಲ್ಲದೆ ಹಾಗೇ ಮರೆಯಾಗಿದ್ದ ವೈರಸ್, ಇದೀಗ ಕೊರೋನಾ ಜೊತೆ ಡ್ರ್ಯಾಗನ್ ರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ.
ಯಾವಾಗ ಮಂಕಿ ಬಿ ಅನ್ನುವ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ ಎಂದು ಗೊತ್ತಾಯ್ತೋ, ಇಡೀ ಜಗತ್ತು ಚೀನಾದ ಕಡೆಗೆ ಮಗದೊಮ್ಮೆ ಮುಖಮಾಡಿದೆ. ವುಹಾನ್ ವೈರಸ್ ನಿಂದ ತತ್ತರಿಸಿರುವ ವಿಶ್ವಕ್ಕೆ ಮಂಕಿ ಬಿ ವೈರಸ್ ಕಂಟಕವಾದರೂ ಅಚ್ಚರಿ ಇಲ್ಲ.
ಚೀನಾ ದೇಶದ ಕೋತಿಗಳಲ್ಲಿ ಮಂಕಿ ಬಿ ಎಂಬ ವೈರಸ್ ಕಂಡು ಬಂದಿದ್ದು 2 ಕೋತಿಗಳ ಪೋಸ್ಟ್ ಮಾರ್ಟಂ ಮಾಡಿದ ಒಬ್ಬ ವೈದ್ಯರಿಗೆ ಸೋಂಕು ತಾಗಿ ಅವರು ಮೃತಪಟ್ಟಿದ್ದಾರೆ.
ಈ ವೈದ್ಯರಿಗೆ ಸೋಂಕು ತಗುಲಿದ ವೇಳೆ ಇದು ಮಂಕಿ ಬಿ ಎಂದು ಗೊತ್ತಿರಲಿಲ್ಲ. ವಾಕರಿಕೆ, ವಾಂತಿಯ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಸೋಂಕಿತರನ್ನು ಹಲವು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಆದ್ರೆ ಯಾವುದೇ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಮೇ 27 ರಂದು ಮೃತಪಟ್ಟಿದ್ದರು.
ಮೃತರ ರಕ್ತ, ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಮಂಕಿ ಬಿ ವೈರಸ್ ಪತ್ತೆಯಾಗಿದೆ.ಇದೇ ವೇಳೆ 2 ಮಂಗಗಳ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಅಲ್ಲೂ ಮಂಕಿ ಬಿ ವೈರಸ್ ಪತ್ತೆಯಾಗಿದೆ.
ಇವೆಲ್ಲಾ ಬೆಳವಣಿಗೆ ಸಂಭವಿಸಿದ ಒಂದು ತಿಂಗಳ ಬಳಿಕ ಚೀನಾ ಈ ಮಾಹಿತಿಯನ್ನು ಹೊರಗೆಡವಿದ್ದು, ಚೀನೀ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ ವ್ಯಕ್ತಿಯ ಸಾವಿಗೆ ಮಂಕಿ ಬಿ ವೈರಸ್ ಕಾರಣ ಅನ್ನೋ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಈ ನಡುವೆ ಪಶುವೈದ್ಯರಿಂದ ಬೇರೆ ಯಾರಿಗೂ ಕೂಡಾ ಸೋಂಕು ತಗುಲಿಲ್ಲ ಎಂದು ಚೀನಾ ಹೇಳಿದೆ. ಇದೊಂದು ನೆಮ್ಮದಿಯ ಸುದ್ದಿಯಾದರೂ, ಚೀನಾ ಸತ್ಯವನ್ನೇ ಹೇಳುತ್ತಿದೆ ಎಂದು ನಂಬುವ ಹಾಗಿಲ್ಲ.
ಸೋಂಕು ತಗುಲಿದ ಒಂದರಿಂದ ಮೂರು ವಾರಗಳ ಅವಧಿಯಲ್ಲಿ ಕಾಯಿಲೆಯ ಗುಣಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಕೇಂದ್ರ ನರಮಂಡಲವನ್ನು ಹಾನಿಗೊಳಿಸುತ್ತದೆ. ಹೀಗಾಗಿ ಇದು ತುಂಬಾ ಅಪಾಯಕಾರಿ ವೈರಸ್ ಎಂದು ತಜ್ಞರು ಹೇಳಿದ್ದಾರೆ.
1933 ರಲ್ಲಿ ಪ್ರಯೋಗಾಲಯದ ಕೆಲಸಗಾರನೊಬ್ಬನಿಗೆ ಆಕಸ್ಮಿಕವಾಗಿ ಕೋತಿ ಕಚ್ಚಿತ್ತು. ಇದಾದ ಬಳಿಕ ಕೆಲಸಗಾರ ಚೇತರಿಸಿಕೊಂಡಿದ್ದರೂ, ಕೆಲ ದಿನಗಳ ಬಳಿಕ ಆತನಲ್ಲಿ ಜ್ವರ ಕಾಣಿಸಿಕೊಂಡಿತ್ತು. ಜೊತೆಗೆ ಮೈಲೈಟಿಸ್ ರೋಗಲಕ್ಷಣಗಳು ಕಾಣಿಸಿಕೊಂಡು 15 ದಿನಗಳ ಬಳಿಕ ಮೃತಪಟ್ಟಿದ್ದ.
Discussion about this post