ಬೆಂಗಳೂರು : ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿರಬೇಕು ಅನ್ನುವುದು ಸಂವಿಧಾನದ ಆಶಯ. ಆದರೆ ಭ್ರಷ್ಟ ಅಧಿಕಾರಿಗಳ ಕಾರಣದಿಂದ ಅದು ವಿಐಪಿ ಸ್ನೇಹಿಯಾಗುತ್ತಿದೆ. ಕಟ್ಟಕಡೆಯ ನಾಗರಿಕನಿಗೆ ನ್ಯಾಯ ಒದಗಿಸಬೇಕಾಗ ಠಾಣೆಗಳು ರಿಯಲ್ ಎಸ್ಟೇಟ್ ಕಟ್ಟೆಗಳಾಗುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಎಸಿಬಿ ದಾಳಿಗಳೇ ಉತ್ತಮ ಉದಾಹರಣೆ.
ಈ ನಡುವೆ ಮಾಜಿ ಶಾಸಕರೊಬ್ಬರಿಂದ ಶರ್ಟ್ ಮತ್ತು ಪ್ಯಾಂಟ್ ಉಡುಗೊರೆಯಾಗಿ ಸ್ವೀಕರಿಸಿದ ಬಾಗಲಗುಂಟೆ ಠಾಣಾ ಪೊಲೀಸರಿಗೆ ರವಿಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒಳಉಡುಪುಗಳನ್ನು ನೀಡಲು ಮುಂದಾಗಿದೆ. ಈ ಸಂಬಂಧ ಸೋಮವಾರ ದೇಣಿಗೆ ಸಂಗ್ರಹ ಕಾರ್ಯ ನಡೆಸಿದ ಕಾರ್ಯಕರ್ತರು ಬ್ರಾಂಡೆಡ್ ಚಡ್ಡಿಗಳನ್ನು ಖರೀದಿಸಿ ಒಳ ಉಡುಪು ಮತ್ತು ಬಟ್ಟೆ ಹೊಲಿಸಿಕೊಳ್ಳಲು ಹಣ ನೀಡಲು ಮುಂದಾಗಿದ್ದಾರೆ.
ಆದರೆ ಈ ವೇಳೆ ಮುಜುಗರಕ್ಕೆ ಒಳಗಾದ ಠಾಣಾಧಿಕಾರಿ ಸುನಿಲ್, ಪೊಲೀಸ್ ನಿಯಮಗಳ ಪ್ರಕಾರ ಉಡುಗೊರೆ ಪಡೆಯುವುದು ನಿಯಮಬಾಹಿರ, ಹೀಗಾಗಿ ಸ್ವೀಕರಿಸಲಾಗದು ಅಂದಿದ್ದಾರೆ. ಈ ನಡುವೆ ಘಟನೆ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ರವಿಕೃಷ್ಣಾ ರೆಡ್ಡಿ, ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸರು ಸೇವಾ ಶಿಷ್ಟಾಚಾರವನ್ನು ಉಲ್ಲಂಘಿಸಿ ಅಲ್ಲಿಯ ಮಾಜಿ ಶಾಸಕರಿಂದ ಶರ್ಟ್ ಮತ್ತು ಪ್ಯಾಂಟ್ ಪೀಸುಗಳ ಉಡುಗೊರೆ ಪಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಇಂದು KRS ಪಕ್ಷದ ವತಿಯಿಂದ ಆ ಠಾಣೆಯ ಪೊಲೀಸರಿಗೆ ಒಳಉಡುಪುಗಳೂ ಸೇರಿದಂತೆ ಮತ್ತಷ್ಟು ಬಟ್ಟೆಗಳ ಉಡುಗೊರೆ ಹಾಗೂ ಬಟ್ಟೆ ಹೊಲಿಸಿಕೊಳ್ಳಲು ಹಣ ನೀಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ KRS ಪಕ್ಷದ ನಿಯೋಗದ ಜೊತೆ ಮಾತನಾಡಿದ ಠಾಣಾಧಿಕಾರಿ ಸುನೀಲ್’ರವರು, ಈ ಪ್ರಕರಣದ ಕುರಿತು ಈಗಾಗಲೇ ಇಲಾಖಾ ವಿಚಾರಣೆ ನಡೆಯುತ್ತಿದೆ ಮತ್ತು ತಮ್ಮ ಕೈಮೀರಿ ಆ ಘಟನೆ ನಡೆದಿದೆ ಎಂದು ವಿಷಾದಿಸಿದರು. ಪೊಲೀಸ್ ಸೇವಾ ನಿಯಮಾವಳಿಗಳ ಪ್ರಕಾರ ಹೀಗೆ ಉಡುಗೊರೆ ಪಡೆಯುವುದು ನಿಯಮಬಾಹಿರ ಆಗಿರುವ ಕಾರಣ ನಾವು ತೆಗೆದುಕೊಂಡು ಹೋಗಿದ್ದ ಒಳ ಉಡುಪುಗಳನ್ನು ಪೊಲೀಸರು ಸ್ವೀಕರಿಸಲಿಲ್ಲ. ಹಾಗೆಯೇ ಸ್ಥಳದಲ್ಲಿಯೇ ಸಂಗ್ರಹಿಸಿದ 1500 ರೂಪಾಯಿ ದೇಣಿಗೆಯನ್ನೂ ಸ್ವೀಕರಿಸಲಿಲ್ಲ.
ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ರಾಜ್ಯದ ಎಲ್ಲಾ ಠಾಣೆಗಳಿಗೆ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ನಡವಳಿಕೆ ಕುರಿತಾದ ಸ್ಪಷ್ಟ ಸಂದೇಶದ ಸುತ್ತೋಲೆಯನ್ನು ಹೊರಡಿಸಬೇಕು. ಈ ವಿಚಾರವಾಗಿ ನಮ್ಮ ಪಕ್ಷದ ನಿಯೋಗ ಇಷ್ಟರಲ್ಲಿಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಲಿದ್ದಾರೆ. ಆ ಭೇಟಿಯ ಸಂದರ್ಭದಲ್ಲಿ ಅವರಿಂದ ನಾವು ಏನನ್ನು ಅಪೇಕ್ಷಿಸುತ್ತಿದ್ದೇವೆಯೋ ಅದನ್ನು ಆ ಭೇಟಿಗೆ ಮೊದಲೇ ಅವರು ಮಾಡಿದರೆ ಅವರ ಮತ್ತು ಇಲಾಖೆಯ ಗೌರವ ಹೆಚ್ಚುತ್ತದೆ. ಆಯ್ಕೆ ಅವರದು.
ಇಂದಿನ ನಮ್ಮ ಪೊಲೀಸರನ್ನು ಭ್ರಷ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳ ಗುಲಾಮಗಿರಿ ಮತ್ತು ಕಪಿಮುಷ್ಟಿಯಿಂದ ಹೊರಗೆ ತಂದು ಅವರನ್ನು ಪ್ರಾಮಾಣಿಕ, ದಕ್ಷ, ಸ್ವಾಭಿಮಾನಿ, ಸ್ವಾವಲಂಬಿ, ಕರ್ತವ್ಯನಿಷ್ಠ ಪೊಲೀಸರನ್ನಾಗಿ ಮಾಡುವುದು KRS ಪಕ್ಷದ ಗುರಿ. ಈ ರಾಜ್ಯದ ಪೊಲೀಸರೂ ಸೇರಿದಂತೆ ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಿದ ದಿನ ಕರ್ನಾಟಕದಲ್ಲಿ ಸ್ವಚ್ಚ, ಪ್ರಾಮಾಣಿಕ ಜನಪರ ರಾಜಕಾರಣವು ಗೆಲುವಿನತ್ತ ಸಾಗುತ್ತದೆ.ಅಂದಿದ್ದಾರೆ.
Discussion about this post