ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವೊಂದು ಕ್ರಮಗಳು ಹಾಸ್ಯಾಸ್ಪದವಾಗಿದೆ. ವಾರದ 5 ದಿನ ರಾಜ್ಯ ಎಲ್ಲಾ ವ್ಯವಹಾರಗಳಿಗೆ ಮುಕ್ತವಾಗಿದ್ದು, ಶನಿವಾರ ಮತ್ತು ಭಾನುವಾರ ಕರ್ಫ್ಯೂ ಹಾಕಲಾಗಿದೆ. ಹಾಗಾದ್ರೆ ಶನಿವಾರ ಮತ್ತು ಭಾನುವಾರ ಮಾತ್ರ ಕೊರೋನಾ ವೈರಸ್ ಜಾಗೃತವಾಗಿರುತ್ತದೆಯೇ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ. ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ ಉಳಿದ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಏರುತ್ತಿದ್ದರೂ ಶಾಲೆಗಳನ್ನು ಬಂದ್ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೊರೋನಾ ತಜ್ಞರು, ಕೊರೋನಾ ನಿಯಂತ್ರಣ ಸಲಹಾ ಸಮಿತಿಯನ್ನೇ ಅನುಮಾನದಿಂದ ನೋಡುವಂತಾಗಿದೆ.
ಈ ನಡುವೆ ರಾಜ್ಯದಲ್ಲಿ ಹೇರಲಾಗಿರುವ ವಿಕೇಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಬಗ್ಗೆ ಸರ್ಕಾರದ ಸಚಿವರೇ ಅಪಸ್ವರ ಎತ್ತಿದ್ದಾರೆ. ಬಿಜೆಪಿ ಸಂಸದರು ಕೂಡಾ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಯಾವಾಗ ಹೊಟೇಲ್ ಮಾಲೀಕರು, ಜನ ಸಾಮಾನ್ಯರು ವಿಕೇಂಡ್ ಕರ್ಫ್ಯೂ ಬಗ್ಗೆ ತಗಾದೆ ತೆಗೆದರೋ ಆಗ ಕಿವುಡಾಗಿದ್ದ ಸರ್ಕಾರ, ಬಿಜೆಪಿ ನಾಯಕರು ವಿಕೇಂಡ್ ಮತ್ತು ನೈಟ್ ಕರ್ಫ್ಯೂ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.
ಈ ಹಿನ್ನಲೆಯಲ್ಲಿ ಇದೇ ತಿಂಗಳ 21 ರಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವಿನ ಬಗ್ಗೆ ಚರ್ಚೆ ನಡೆಯಲಿದೆ. ಕರ್ಫ್ಯೂ ಕೈ ಬಿಡುವುದೋ ಮುಂದುವರಿಸುವುದೋ ಅನ್ನುವ ಬಗ್ಗೆ ಅಂದೇ ನಿರ್ಧಾರ ಹೊರ ಬೀಳಲಿದೆ.
ಈಗಾಗಲೇ ಕೊರೋನಾ ಮೂರನೇ ಅಲೆಯನ್ನು ಎದುರಿಸಿರುವ ರಾಜ್ಯಗಳಲ್ಲಿ, ಕೊರೋನಾ ಮೂರನೇ ಅಲೆ ಹರಡಿದಷ್ಟೇ ವೇಗದಲ್ಲಿ ತಗ್ಗಲಾರಂಭಿಸಿದೆ. ಹೀಗಾಗಿ ರಾಜ್ಯದಲ್ಲೂ ಕೊರೋನಾ ಸೋಂಕಿನ ಮೂರನೇ ಅಲೆ ಫೆಬ್ರವರಿ 1 ರಿಂದ ಕ್ಷೀಣಿಸೋ ಸಾಧ್ಯತೆಗಳಿದೆ. ಹೀಗಾಗಿ ನಿರ್ಬಂಧ ಸಡಿಲಿಸಿ, ಹೊಸ ನಿರ್ಬಂಧಗಳನ್ನು ಹೇರದಿರಲು ಸರ್ಕಾರ ನಿರ್ಧರಿಸುವ ಸಾಧ್ಯತೆಗಳಿದೆ.
Discussion about this post