ನವದೆಹಲಿ : 2 ವರ್ಷದ ಮಗುವಿನ ಅನಾರೋಗ್ಯ ಗುಣಪಡಿಸುವ ನಿಟ್ಟಿನಲ್ಲಿ ಅಮೆರಿಕಾದಿಂದ ಬರಲಿರುವ 16 ಕೋಟಿ ಮೊತ್ತದ ಮದ್ದಿನ ತೆರಿಗೆಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಮಾನವೀಯತೆ ತೋರಿದೆ.
ಅನುವಂಶಿಕ ಸ್ನಾಯು ಕ್ಷೀಣತೆ ಅನ್ನೋ ಅಪರೂಪದ ಕಾಯಿಲೆಗೆ ತುತ್ತಾಗಿರುವ ತಮಿಳುನಾಡಿನ 2 ವರ್ಷದ ಮಗುವಿನ ಆರೋಗ್ಯ ಸುಧಾರಿಸಲು ವಿಶ್ವದ ದುಬಾರಿ ಮದ್ದಿನ ಅಗತ್ಯವಿತ್ತು.
ಇದಕ್ಕಾಗಿ ಅಮೆರಿಕಾ ಮೂಲದ ಝೋಲ್ಗೆಸ್ಟ್ರಾ ಅನ್ನುವ ಇಂಜೆಕ್ಷನ್ ಅನ್ನು 16 ಕೋಟಿ ಕೊಟ್ಟು ಖರೀದಿಸಲು ಮಗುವಿನ ಕುಟುಂಬ ನಿರ್ಧರಿಸಿತ್ತು. ಇದಕ್ಕಾಗಿ ಕುಟುಂಬ ಕ್ರೌಡ್ ಫಂಡಿಂಗ್ ಮುಖಾಂತರ ಒಂದಿಷ್ಟು ಹಣವನ್ನೂ ಸಂಗ್ರಹಿಸಿತ್ತು. ಈ ವಿಷಯ ಕೇಂದ್ರ ಹಣಕಾಸು ಇಲಾಖೆಯನ್ನೂ ತಲುಪಿತ್ತು. ಹೀಗಾಗಿ ಇದೀಗ ಝೋಲ್ಗೆಸ್ಟ್ರಾ ಇಂಜೆಕ್ಷನ್ ನ ಕಸ್ಟಮ್ ಸುಂಕ ಹಾಗೂ ಜಿಎಸ್ಟಿಗೆ ವಿನಾಯತಿ ನೀಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ಮಾನವೀಯ ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮದಿಂದ ದುಬಾರಿ ಇಂಜೆಕ್ಷನ್ ಬೆಲೆ ಶೇ 35ರಷ್ಟು ಕಡಿಮೆಯಾಗಲಿದೆ. ಹೀಗಾಗಿ 16 ಕೋಟಿಯ ಇಂಜೆಕ್ಷನ್ 9 ಕೋಟಿಗೆ ದೊರೆಯಲಿದೆ.
ಆದರೆ ಈ ರೀತಿಯ ದುಬಾರಿ ಇಂಜೆಕ್ಷನ್ ಗಾಗಿ ದೇಶದ ಅನೇಕ ಮಕ್ಕಳು ಕಾಯುತ್ತಿದ್ದಾರೆ. ಇವರೆಲ್ಲರಿಗೂ ಇದೇ ರೀತಿ ಕೇಂದ್ರ ಸರ್ಕಾರ ಮಾನವೀಯತೆ ತೋರಿದರೆ ಚೆನ್ನಾಗಿತ್ತು.
Discussion about this post