ತಮಿಳುನಾಡು : ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನುವಂತೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಬಳಿಕವೂ ವಿವಾದಗಳು ಮಾತ್ರ ನಿಂತಿಲ್ಲ. ಜಯಲಲಿತಾ ನಿಧನವಾದ ಬೆನ್ನಲ್ಲೇ ನಾವು ಅವರ ಕುಟುಂಬಸ್ಥರು, ನಾನು ಅವರ ಮಗಳು ಅನ್ನುವವರ ಸಂಖ್ಯೆ ತುಂಬಾ ಇತ್ತು. ಇದಾದ ಬಳಿಕ ಆ ವಿವಾದ ತಣ್ಣಗಾಗಿತ್ತು.
ಇದೀಗ ಜಯಲಲಿತಾ ನಿಧನವಾದ 5 ವರ್ಷಗಳ ಬಳಿಕ ಮತ್ತೋರ್ವ ಮಹಿಳೆ ತಾವು ಅವರ ಪುತ್ರಿ ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಮಹಿಳೆ ಪ್ರೇಮಾ ಅನ್ನುವವರು ಈಗ ಈ ಹೇಳಿಕೆ ನೀಡಿದ್ದು. ಮೈಸೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಚೆನ್ನೈ ಪಲ್ಲವರಂನಲ್ಲಿ ವಾಸಿಸುತ್ತಿದ್ದೇನೆ ಅಂದಿದ್ದಾರೆ.
ಈ ಪ್ರೇಮಾ, ಚೆನ್ನೈನ ಮೆರೀನಾ ಬೀಚ್ ಬಳಿಯಿರುವ ಜಯಲಲಿತಾ ಸ್ಮಾರಕ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ಸಮಯ ಬಂದಾಗ ನಾನು ಜಯಲಲಿತಾ ಮಗಳು ಅನ್ನುವುದಕ್ಕೆ ಸಾಕ್ಷಿ ಕೊಡುತ್ತೇನೆ ಅಂದಿದ್ದಾರೆ. ಜೊತೆಗೆ ಶೀಘ್ರದಲ್ಲೇ ಶಶಿಕಲಾ ಅವರನ್ನೂ ಭೇಟಿಯಾಗುವುದಾಗಿಯೂ ಘೋಷಿಸಿದ್ದಾರೆ.

ಜಯಲಲಿತಾ ನನ್ನನ್ನು ಬೇಬಿ ಎಂದು ಕರೆಯುತ್ತಿದ್ದರು. ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಹಿಂಬಾಗಿಲ ಮೂಲಕ ಅವರನ್ನು ಭೇಟಿಯಾಗಿದ್ದೆ. ಜಯಲಲಿತಾ ಅವರ ಸಹಾಯಕ ಮುತ್ತುಸ್ವಾಮಿ ಒಮ್ಮೆ ಪೊಯೇಸ್ ಗಾರ್ಡನ್ನಲ್ಲಿ ಅಮ್ಮನನ್ನು ಭೇಟಿ ಮಾಡಿಸಿದ್ದರು. ಈ ವೇಳೆ ಜಯಲಲಿತಾ ನನಗೆ ಮುತ್ತು ಕೊಟ್ಟಿದ್ದರು ಅಂದಿದ್ದಾರೆ.
ಮುತ್ತು ಕೊಟ್ಟಿದ್ದಾರೋ ಇಲ್ಲವೋ ಹೇಳುವುದಕ್ಕೆ ಜಯಲಲಿತಾ ಅವರಿಲ್ಲ. ಆದರೆ ಪ್ರೇಮಾಮ ಅವರ ನಡೆ ನೋಡಿದರೆ ಶಶಿಕಲಾ ನೆರಳು ಮಾತ್ರ ಕಾಣಿಸುತ್ತಿರುವುದು ಸುಳ್ಳಲ್ಲ.
ಹಿಂದೊಮ್ಮೆ ಬೆಂಗಳೂರು ಮೂಲದ ಅಮೃತಾ ಅನ್ನುವವರು ನಾನು ಜಯಲಲಿತಾ ಮಗಳು ಎಂದು ಹೇಳಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

Discussion about this post