ಕೇರಳ : ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆಯಲಿದ್ದ ಮುಸ್ಲಿಂ ಯುವತಿಯೋರ್ವಳ ಕಿವಿಯಲ್ಲಿ ಹಿಂದೂ ವೈದ್ಯೆಯೊಬ್ಬರು ಶಹಾದತ್ ಪಠಿಸಿ ಮಾನವೀಯತೆ ಮರೆದಿದ್ದಾರೆ. ಈ ಘಟನೆ ಕೇರಳದ ಪಾಲಕ್ಕಾಡ್ ಪಟ್ಟಂಬಿಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಕೊರೋನಾ ಕಾರಣದಿಂದ ನ್ಯುಮೋನಿಯಾಕ್ಕೆ ಒಳಗಾಗಿದ್ದ ಯುವತಿಯನ್ನು ಎರಡು ವಾರಗಳಿಂದ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೋನಾ ಸೋಂಕಿತೆಯಾಗಿದ್ದ ಕಾರಣ ಸಂಬಂಧಿಕರಿಗೆ ಒಳಗೆ ಪ್ರವೇಶ ಇರಲಿಲ್ಲ. ಮೇ 17 ರಂದು ರೋಗಿಯ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನಲೆಯಲ್ಲಿ ವೆಂಟಿಲೇಟರ್ ತೆಗೆಯುವ ಪರಿಸ್ಥಿತಿ ಬಂದಿತ್ತು. ಈ ಸಂದರ್ಭದಲ್ಲಿ ಯುವತಿ ಯಾವುದಕ್ಕೂ ಚಡಪಡಿಸುತ್ತಿರುವುದನ್ನು ಅಲ್ಲೇ ಇದ್ದ ವೈದ್ಯ ರೇಖಾ ಗಮನಿಸಿದ್ದಾರೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ಅವರು ರೋಗಿಯ ಕಿವಿಯಲ್ಲಿ ಲಾ ಇಲಾಹ ಇಲ್ಲಲ್ಲಾ ಮುಹಮ್ಮದೂರ್ ರಸುಲುಲ್ಲಾ ಎಂದು ಪಠಿಸಿದ್ದಾರೆ. ಅಷ್ಟೇ ಸುದೀರ್ಘವಾದ ಉಸಿರು ಎಳೆದುಕೊಂಡ ಯುವತಿ ಕಣ್ಣು ಮುಚ್ಚಿದ್ದಾಳೆ.
ಇನ್ನು ತಮ್ಮ ಈ ಕಾರ್ಯದ ಕುರಿತಂತೆ ಸಹೋದ್ಯೋಗಿಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಹುಟ್ಟಿ ಬೆಳೆದದ್ದು ದುಬೈನಲ್ಲಿ, ಹೀಗಾಗಿ ಮುಸ್ಲಿಮರ ನಂಬಿಕೆ ಆಚರಣೆಗಳ ಬಗ್ಗೆ ನನಗೆ ಅರಿವಿದೆ. ಹೀಗಾಗಿ ಒಬ್ಬ ವೈದ್ಯಯಾಗಿ ನನ್ನ ನಂಬಿಕೆಗೆ ತಾರತಮ್ಯ ಮಾಡದೆ ಅವರ ಮನಸ್ಸಿಗೆ ನೆಮ್ಮದಿ ಕೊಡುವ ಪ್ರಯತ್ನ ಮಾಡಿದ್ದೇನೆ ಅಂದಿದ್ದಾರೆ.
ಇದೀಗ ರೇಖಾ ಅವರ ಕಾರ್ಯ ವೈರಲ್ ಆಗಿದ್ದು ರೇಖಾ ಅವರ ಕೆಲಸವನ್ನು ಮುಸ್ಲಿಂ ಮೌಲ್ವಿಗಳು ಹೊಗಳಿದ್ದಾರೆ. ಶಹಾದತ್ ಅನ್ನು ಸಾಮಾನ್ಯವಾಗಿ ಸಂಬಂಧಿಕರೇ ಮಾಡುತ್ತಾರೆ. ಆದರೆ ಕೊರೋನಾ ಸೋಂಕಿತಯ ಬಳಿಗೆ ಬೇರೆ ಯಾರೂ ಕೂಡಾ ಹೋಗಲು ಸಾಧ್ಯವಿಲ್ಲದ ಹಿನ್ನಲೆಯಲ್ಲಿ ವೈದ್ಯರೇ ಈ ಕೆಲಸ ಮಾಡುವ ಮೂಲಕ ಸೌಹಾರ್ದತೆ ಸಾಕ್ಷಿಯಾಗಿದ್ದಾರೆ ಅಂದಿದ್ದಾರೆ.
Discussion about this post