ಅಹಮದಾಬಾದ್ : ಕೊರೋನಾ ಲಸಿಕೆ ಪಡೆದಿಲ್ಲ ಅನ್ನುವ ಕಾರಣಕ್ಕೆ ವ್ಯಾಪಾರಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರ ನಿಗದಿತ ಪಡಿಸಿದ ಅವಧಿಯೊಳಗೆ ಲಸಿಕೆ ಪಡೆಯದ ಕಾರಣಕ್ಕೆ ಇದೀಗ ಬಂಧಿತ ವ್ಯಾಪಾರಿಯ ವಿರುದ್ಧ FIR ಕೂಡಾ ದಾಖಲಿಸಲಾಗಿದೆ.
54 ವರ್ಷದ ವ್ಯಾಪಾರಿಯ ವಿರುದ್ಧ ದಾಖಲಾಗಿರುವ FIR ನಲ್ಲಿ, ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಜುಲೈ 9ರಂದು ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರಕಾರ, ಹೋಟೆಲ್, ಮಾಲ್, ಪಡಿತರ ಅಂಗಡಿ, ಸಲೂನ್ ಹಾಗೂ ರೆಸ್ಟೋರೆಂಟ್ ನಡೆಸುವವರು ಜುಲೈ 31ರೊಳಗೆ ಕೊರೋನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಆದರೆ ಪೊಲೀಸರು ಹೇಳುವುದೇ ಬೇರೆ, ವ್ಯಾಪಾರಿ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಮಾಸ್ಕ್ ಕೂಡಾ ಧರಿಸಿರಲಿಲ್ಲ. ಹೀಗಾಗಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಅಂದಿದ್ದಾರೆ.ಲಸಿಕೆ ತೆಗೆದುಕೊಂಡಿಲ್ಲ ಅನ್ನುವ ಕಾರಣಕ್ಕಾಗಿ ಬಂಧಿಸಿಲ್ಲ ಅನ್ನುವುದು ಇನ್ಸ್ಪೆಕ್ಟರ್ ಕೆ.ಪಿ. ಸಾಗಥಿಯಾ ಮಾತು.
ಜುಲೈ 17ರಂದು ದ್ದ ಪೊಲೀಸ್ ಕಾನ್ಸ್ಟೇಬಲ್ ಉಡೆಸಿನ್ ಠಾಕೋರ್ ಗಸ್ತಿನಲ್ಲಿ, ಅಂಗಡಿಯೊಂದರ ಮುಂದೆ ಹಲವು ಗ್ರಾಹಕರು ಒಟ್ಟಾಗಿ ನಿಂತಿರುವುದನ್ನು ನೋಡಿದ್ದರು. ಅಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇರಲಿಲ್ಲ ಹೀಗಾಗಿ ಅಂಗಡಿ ಮಾಲೀಕನ ಬಳಿ ಮೊದಲ ಡೋಸ್ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದಾಗ ಆತ ಇಲ್ಲ ಅಂದಿದ್ದ. ಹೂಗಾಗಿ ವ್ಯಾಪಾರಿಯು ಕೊರೋನಾ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಬಂಧಿಸಲಾಗಿದೆ ಅನ್ನುವುದು ಪೊಲೀಸರ ವಾದ.
Discussion about this post