ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಳಿಕೆಯಾಗಿದ್ದ ಮಳೆ ಇದೀಗ ಮತ್ತೆ ಅಬ್ಬರಿಸಲಿದೆ ಎಂದು ಹವಮಾನ ಇಲಾಖೆಗೆ ಹೇಳಿದೆ. ಈ ಸಂಬಂಧ ಮುನ್ನೆಚ್ಚರಿಕೆ ಕೊಟ್ಟಿರುವ ಹವಮಾನ ಇಲಾಖೆ ಸಪ್ಟೆಂಬರ್ 24ರ ತನಕ ಮಳೆಯಾಗಲಿದೆ ಅಂದಿದೆ. ಈಗಾಗಲೇ ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದೆ.
ಹೀಗಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವಿರಾಮ ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭವಾಗುವ ಸಾಧ್ಯತೆಗಳಿದೆ. ಇದರೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ತುಮಕೂರು,ಹಾಸನ, ಕೊಡಗು, ಮೈಸೂರು, ರಾಮನಗರ, ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಗಳಿದೆ. ಮಾತ್ರವಲ್ಲದೆ ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್ ನ ಕೆಲವು ಜಿಲ್ಲೆಗಳು ರಾಜಸ್ಥಾನ, ವಿದರ್ಭ, ಮರಾಠವಾಡ, ತೆಲಂಗಾಣ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ನಲ್ಲೂ ಭಾರೀ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಬೆಂಗಳೂರಿನಲ್ಲಿ ಕೂಡ ಸೆ. 25ರವರೆಗೂ ಮಳೆಯ ಆರ್ಭಟ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವೇ ಈ ಮಳೆಗೆ ಕಾರಣವಾಗಿದ್ದು, ಕರ್ನಾಟಕದ ಕರಾವಳಿಯಲ್ಲಿ ಅಬ್ಬರಿಸಲಿರುವ ಮಳೆ ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಸಾಧಾರಣವಾಗಿ ಸುರಿಯಲಿದೆಯಂತೆ. ಈಗಾಗಲೇ ಕೊಲ್ಕೋತ್ತಾದಲ್ಲಿ ಮಳೆ ಅಬ್ಬರಿಸಿದ್ದು, 2017ರ ಬಳಿಕ ಈ ಪ್ರಮಾಣದಲ್ಲಿ ಮಳೆ ಸುರಿದಿರುವುದು ಮೊದಲು ಅನ್ನಲಾಗಿದೆ.
Discussion about this post