ನವದೆಹಲಿ : ಸೀರೆ ಉಟ್ಟು ಬಂದ ಗ್ರಾಹಕರಿಗೆ ಪ್ರವೇಶವನ್ನು ನಿರಾಕರಿಸಿದ್ದ ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿರೋ ಅಕ್ವಿಲಾ ದೆಹಲಿ ರೆಸ್ಟೋರೆಂಟ್ ಈಗ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಬೀಗ ಜಡಿದಿದೆ. ಅಂದ ಹಾಗೇ ಬೀಗ ಜಡಿದಿರುವುದು ಸೀರೆಯ ವಿಚಾರದಲ್ಲಿ ಅಲ್ಲ.
ಅಕ್ವಿಲಾ ದೆಹಲಿ ರೆಸ್ಟೋರೆಂಟ್ ಗೆ ಸೀರೆ ಧರಿಸಿ ಬಂದ ಕಾರಣಕ್ಕೆ ಮಹಿಳೆಯೊಬ್ಬರಿಗೆ ಪ್ರವೇಶವನ್ನು ಅಲ್ಲಿನ ಸಿಬ್ಬಂದಿ ನಿರಾಕರಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆಗಿದ್ದ ವಿಡಿಯೋದಲ್ಲಿ “ಸೀರೆ ಹಾಕಿದವರಿಗೆ ಈ ರೆಸ್ಟೋರೆಂಟ್‌ನಲ್ಲಿ ಅವಕಾಶವಿಲ್ಲ ಎಂದು ಎಲ್ಲಿ ಬರೆಯಲಾಗಿದೆ. ನನಗೆ ತೋರಿಸಿ ಎಂದು ಮಹಿಳಾ ಗ್ರಾಹಕರು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರೆಸ್ಟೋರೆಂಟ್‌ನ ಸಿಬ್ಬಂದಿ, ಮೇಡಮ್ ನಾವು ಇಲ್ಲಿ ಸ್ಮಾರ್ಟ್ ಕ್ಯಾಷುವಲ್ಸ್ ಧರಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಸೀರೆ ಸ್ಮಾರ್ಟ್ ಕ್ಯಾಷುವಲ್ಸ್ ಅಲ್ಲ ಎಂದು ಹೇಳಿದ್ದರು.

ಈಗ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿ ಇರುವ ಈ ಅಕ್ವಿಲಾ ರೆಸ್ಟೋರೆಂಟ್‌ನ್ನು ಮುಚ್ಚಿಸಿದೆ. ಸರಿಯಾದ ಪರವಾನಗಿ ಇಲ್ಲದ ಕಾರಣಕ್ಕೆ ಬೀಗ ಜಡಿಯಲಾಗಿದ್ದು, ಸದರಿ ರೆಸ್ಟೋರೆಂಟ್‌ಗೆ ಸರಿಯಾದ ವ್ಯಾಪಾರದ ಪರವಾನಗಿ ಇಲ್ಲ, ಯಾವುದೇ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ಈ ಕ್ರಮ ಕೈಗೊಳ್ಳಲಾಗಿದೆ.
ಒಟ್ಟಿನಲ್ಲಿ ಸೀರೆ ವಿಚಾರಕ್ಕೆ ಕೈ ಹಾಕಿದ ಮಾಲೀಕರು, ಶಟರ್ ಎಳೆಯುವಂತಾಗಿದೆ. ಅದಕ್ಕೆ ಅಲ್ವಾ ಕನ್ನಡ ಸಿನಿಮಾದಲ್ಲಿ ಹಾಡಿರೋದು, ಸೀರೆಯ ವಿಷಯ ಬೇಡವೋ ಶಿಷ್ಯ… ಅಂತಾ
Discussion about this post