ನವದೆಹಲಿ : ದೇಶದಲ್ಲಿ ಡ್ರಗ್ಸ್ ಜಾಲ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸೆಲೆಬ್ರೆಟಿಗಳು ಅವರ ಮಕ್ಕಳು ಈ ದಂಧೆಯಲ್ಲಿ ತೊಡಗಿಕೊಂಡಿರುವುದು ಈವರೆಗಿನ ಅನೇಕ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಈ ನಡುವೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಡ್ರಗ್ಸ್ ಹೊಂದಿದ ಮಂದಿಯೂ ದಾಳಿ ವೇಳೆ ಸಿಕ್ಕಿ ಬೀಳುತ್ತಿದ್ದಾರೆ. ಆದರೆ ಇಂತಹ ಪ್ರಕರಣಗಳನ್ನು ದಡ ಸೇರಿಸಲು ತನಿಖಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾದಕ ವಸ್ತು ನಿಗ್ರಹ ಕಾಯ್ದೆ (NDPS ) ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ತಿದ್ದುಪಡಿ ಮಸೂದೆಯಲ್ಲಿ ಮಾದಕವಸ್ತು ವ್ಯಸನಿಗಳನ್ನು ಅಪರಾಧಿಗಳು ಎಂದು ಕರೆಯುವ ಬದಲು ಸಂತ್ರಸ್ಥರು ಎಂದು ಪರಿಗಣಿಸಲಾಗುತ್ತದೆ. ಜೊತೆಗೆ NDPS ಕಾಯ್ದೆ 1985ರಲ್ಲಿ ಸೆಕ್ಷನ್ 39 ಮತ್ತು ಇತರ ಕೆಲ ಸೆಕ್ಷನ್ ಗಳಿಗೆ ತಿದ್ದುಪಡಿ ತರಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಸಣ್ಣ ಪ್ರಮಾಣದ ಡ್ರಗ್ಸ್ ಸೇವನೆ ಅಪರಾಧದಿಂದ ಹೊರಗಿಡಲಾಗುತ್ತದೆ.
ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಶಿಫಾರಸು ಮಾಡಿತ್ತು. ವೈಯುಕ್ತಿಕ ಉದ್ದೇಶಕ್ಕಾಗಿ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸೋದು ಪತ್ತೆಯಾದರೆ ಅವರನ್ನು ಜೈಲು ಶಿಕ್ಷೆಯಿಂದ ಹೊರಗಿಡಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ ಇದೀಗ ಮಾದಕ ವಸ್ತು ನಿಗ್ರಹ ಕಾಯ್ದೆ (NDPS ) ಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಈ ಮೂಲಕ ತಾವಾಗಿಯೇ ಮನಪರಿವರ್ತನೆ ಮಾಡಿಕೊಂಡು ಮರುವಸತಿ ಕೇಂದ್ರಗಳಲ್ಲಿ ಚಟ ತೊರೆದರೆ ಜೈಲಿನಿಂದ ವಿನಾಯ್ತಿ ಸಿಗಲಿದೆ. ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸುವವರಿಗೆ ಮನ ಪರಿವರ್ತನೆಯ ಅವಕಾಶ ಸಿಗಲಿದೆ.
Discussion about this post