ನವದೆಹಲಿ : ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವಾಗಿದ್ದ ಒಮಿಕ್ರೋನ್ ತಳಿಯ ಎರಡು ಉಪತಳಿಗಳು ಭಾರದಲ್ಲೂ ಪತ್ತೆಯಾಗಿದೆ. ಸೋಂಕು ಪತ್ತೆಯಾದ ಇಬ್ಬರೂ ಕೂಡಾ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿಲ್ಲ. ಹೀಗಾಗಿ ಇದೀಗ ಮತ್ತೊಂದು ಅಲೆಯ ಬಗ್ಗೆ ಆತಂಕ ಸೃಷ್ಟಿಯಾಗಿದೆ.
ಈ ಎರಡೂ ಉಪತಳಿಗಳು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಬಳಿಕ ವಿವಿಧ ದೇಶಗಳಿಗೆ ಹರಡಿ ತೀವ್ರ ಸೋಂಕಿಗೆ ಕಾರಣವಾಗಿತ್ತು.
ಒಮಿಕ್ರೋನ್ ನ ಬಿಎ4 ಹಾಗೂ ಬಿಎ5 ಉಪತಳಿಗಳು ತಮಿಳುನಾಡು ಮತ್ತು ತೆಲಂಗಾಣದಲ್ಲಿ ಪತ್ತೆಯಾಗಿದೆ. ತಮಿಳುನಾಡಿನ 19 ವರ್ಷದ ಮಹಿಳೆಯಲ್ಲಿ ಬಿಎ4 ಸೋಂಕು ಪತ್ತೆಯಾಗಿದೆ. ಈಕೆ ಈಗಾಗಲೇ ಕೋವಿಡ್ ಲಸಿಕೆಯ ಎರಡು ಡೋಸುಗಳನ್ನೂ ಪಡೆದಿದ್ದು, ಯಾವುದೇ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿಲ್ಲ. ಹೀಗಾಗಿ ಇದನ್ನು ಸ್ಥಳೀಯವಾಗಿ ಕಂಡು ಬಂದ ಪ್ರಕರಣ ಎಂದು ಗುರುತಿಸಲಾಗಿದೆ. ಜೊತೆಗೆ ಸೋಂಕಿತೆಗೆ ಕೋರೋನಾದ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದೆ.
ಇನ್ನು ತೆಲಂಗಾಣದಲ್ಲಿ 80 ವರ್ಷದ ವ್ಯಕ್ತಿಯೊಬ್ಬರಲ್ಲಿ ಒಮಿಕ್ರೋನ್ ನ ಬಿಎ5 ಸೋಂಕು ಪತ್ತೆಯಾಗಿದ್ದು, ಇವರೂ ಕೂಡಾ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಜೊತೆಗೆ ಯಾವುದೇ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿಲ್ಲ.
ಇದೀಗ ಇಬ್ಬರೂ ಸೋಂಕಿತರಕ್ಕೆ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಬಿಎ4 ಉಪತಳಿಯ ಸೋಂಕು ಕಂಡು ಬಂದಿತ್ತು. ಆದರೆ ವಿದೇಶಿ ಪ್ರವಾಸದ ಹಿನ್ನಲೆಯ ಕಾರಣ ಅದು ದೇಶಿಯ ಪ್ರಕರಣ ಎಂದು ಪರಿಗಣಿಸಿರಲಿಲ್ಲ.
Discussion about this post