ಭಾರತ ದೇಶ ಕೊರೋನಾ ಸೋಂಕಿನ ಎರಡನೆ ಅಲೆಯಿಂದ ತತ್ತರಿಸಿ ಹೋಗಿದೆ. ಅದರಲ್ಲೂ ಕೊರೋನಾ ವೈರಸ್ ಗಳು ರೂಪಾಂತರಿ ಹೊಂದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರ ದಿವ್ಯ ನಿರ್ಲಕ್ಷ್ಯದ ಕಾರಣದಿಂದ ಸರ್ಕಾರ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದೆ. ಕನಿಷ್ಟ ಪಕ್ಷ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಜನ ಕಾಪಾಡಿಕೊಂಡಿದ್ರೆ ಸಮಸ್ಯೆ ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಕನಿಷ್ಟ ಪಕ್ಷ ರಾಜಕಾರಣಿಗಳ ಸಮಾವೇಶಗಳನ್ನು ಜನರೇ ಬಹಿಷ್ಕರಿಸುತ್ತಿದ್ರೆ, ಅವರಿಗೆ ಬುದ್ದಿ ಬರುತ್ತಿತ್ತು. ಸಿನಿಮಾ ಸ್ಟಾರ್ ಗಳನ್ನು ಸೈಡಿಗಿಡುತ್ತಿದ್ರೆ ಕೊರೋನಾ ಸೋಂಕು ಈ ಮಟ್ಟಿಗೆ ಅಬ್ಬರಿಸುತ್ತಿರಲಿಲ್ಲ.
ಈ ನಡುವೆ ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಕೂಡಾ ಭರದಿಂದ ಸಾಗಿದೆ. ಆದರೆ ಜನರ ನಿರ್ಲಕ್ಷ್ಯದ ಕಾರಣದಿಂದ ನಿರೀಕ್ಷಿತ ಗುರಿ ಮುಟ್ಟಲು ಅಲ್ಲೂ ಸಾಧ್ಯವಾಗಿಲ್ಲ. ಇದೀಗ ಕೊರೋನಾ ಸೋಂಕಿನ ಅಲೆ ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತಿರುವಂತೆ ಲಸಿಕಾ ಹಾಕಿಸಿಕೊಳ್ಳಲು ಜನ ಮುಗಿ ಬೀಳ ತೊಡಗಿದ್ದಾರೆ. ಲಸಿಕೆಯನ್ನು ಟೀಕಿಸಿದ ಬುದ್ದಿಜೀವಿಗಳು ಕೂಡಾ ಇದೀಗ ಲಸಿಕಾ ಕೇಂದ್ರಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ನೂಕು ನುಗ್ಗಲು ನಿಭಾಯಿಸುವ ಸಾಮರ್ಥ್ಯ ನಮ್ಮ ಆರೋಗ್ಯ ವ್ಯವಸ್ಥೆಗಿಲ್ಲ. ಒಂದು ವೇಳೆ ಸರ್ಕಾರ ಹೇಳಿದ ಸಂದರ್ಭದಲ್ಲೇ 45 ರಿಂದ ಮೇಲ್ಪಟ್ಟವರು ಲಸಿಕಾ ಹಾಕಿಸಿಕೊಂಡಿದ್ರೆ ಈ ಸಮಸ್ಯೆ ಬರುತ್ತಿರಲಿಲ್ಲ.
ಒಂದು ವೇಳೆ ಸರ್ಕಾರ ಹೇಳಿದಂತೆ ಲಸಿಕೆ ಹಾಕಿಸಿಕೊಳ್ಳುತ್ತಿದ್ರೆ ಇವತ್ತು ಗರಿಷ್ಟ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿರುತ್ತಿದ್ರು, ಮಾತ್ರವಲ್ಲದೆ ಮಾಸ್ಕ್ ಬಿಸಾಡಿ ಆರಾಮವಾಗಿ ತಿರುಗಾಡಬಹುದಿತ್ತು.
ಇದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ಅಮೆರಿಕಾ, ಒಂದು ಕಾಲದಲ್ಲಿ ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿದ್ದ ಅಮೆರಿಕಾ ಟ್ರಂಪ್ ಮನೆಗೆ ಹೋಗುತ್ತಿದ್ದಂತೆ ಸೋಂಕು ಸೋಲಿಸುವತ್ತ ಹೆಜ್ಜೆ ಹಾಕಿದೆ. ಅಷ್ಟು ಮಾತ್ರವಲ್ಲದೆ ಹೊಸದಾಗಿ ಬಂದಿರುವ ಬೈಡೆನ್ ಸರ್ಕಾರ ಮಾಸ್ಕ್ ಬಿಸಾಡಿ….ಆರಾಮವಾಗಿ ತಿರುಗಾಡಿ ಎಂದು ತನ್ನ ಜನರಿಗೆ ಹೇಳಿದೆ. ಜೊತೆಗೆ ಪಬ್ ಬಾರ್ ಗಳಲ್ಲಿ ಮಾಸ್ಕ್ ಬಿಸಾಡಿ ತೂರಾಡಿ ಅಂದಿದೆ.
ಅರೇ ಬೈಡನ್ ಗೆ ತಲೆ ಕೆಟ್ಟಿದೆಯೇ ಅಂದುಕೊಳ್ಳಬೇಡಿ. ಟ್ರಂಪ್ ರೀತಿಯಲ್ಲೇ ಬೈಡನ್ ಗೆ ಹುಚ್ಚು ಹಿಡಿದಿಲ್ಲ ತಾನೇ ಎಂದು ಪ್ರಶ್ನಿಸಬೇಡಿ. ಖಂಡಿತಾ ಇಲ್ಲ. ಮಾಸ್ಕ್ ಕಡ್ಡಾಯವಲ್ಲ ಅನ್ನುವ ಆದೇಶದಲ್ಲಿ ಒಂದು ಷರತ್ತು ವಿಧಿಸಲಾಗಿದೆ. ಯಾರೆಲ್ಲಾ ಎರಡು ಡೋಸ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೋ ಅವರು ಮಾತ್ರ ಯಾರ ಹಂಗು ಇಲ್ಲದೆ ತಿರುಗಾಡಬಹುದಾಗಿದೆ. ಹಾಗಂತ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಸ್ಥಳವಾಗಿದ್ರೆ ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಹಾಕಿಸಿಕೊಳ್ಳುವುದು ಉತ್ತಮ ಅಂದಿದೆ.
ಇಂತಹುದೊಂದು ಆದೇಶ ಹೊರ ಬೀಳಲು ಕಾರಣವಾಗಿರುವುದು ಅಮೆರಿಕಾದಲ್ಲಿ ನಡೆದ ಲಸಿಕಾ ಕಾರ್ಯಕ್ರಮ. ಭಾರತದ ರೀತಿಯಲ್ಲೇ ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗಿತ್ತು. ಬಳಿಕ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲಾಗಿತ್ತು. ಇದಾದ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಘೋಷಿಸಲಾಗಿತ್ತು.
ಯಾವಾಗ ಲಸಿಕೆಯ ಕಾರ್ಯಕ್ರಮವೇ ವೇಗ ಸಿಕ್ಕಿತೋ ಅಮೆರಿಕಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯೂ ತೀವ್ರವಾಗಿ ಇಳಿಯತೊಡಗಿತು. ಈ ಕಾರಣದಿಂದಲೇ ಅಮೆರಿಕಾ ಎರಡು ಡೋಸ್ ಪಡೆದವರು ಮಾಸ್ಕ್ ಇಲ್ಲದೆ ಆರಾಮವಾಗಿ ತಿರುಗಾಡಬಹುದು ಎಂದು ಹೇಳಿದೆ.
ಒಂದು ವೇಳೆ ಭಾರತೀಯರು ಕೂಡಾ ಸರ್ಕಾರ ಕೈಗೊಂಡಿರುವ ಲಸಿಕಾ ಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ, ಕೊರೋನಾ ವಿರುದ್ಧ ದಿಗ್ವಿಜಯ ಸಾಧಿಸಬಹುದಾಗಿದೆ.
Discussion about this post