ನವದೆಹಲಿ : ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದೆ. ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಇಂದು ನಡೆಯಬೇಕಾಗಿದ್ದ ಸಂಪುಟ ಸಭೆ ಹಾಗೂ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಗಳನ್ನು ರದ್ದುಗೊಳಿಸಲಾಗಿದೆ.
ಈ ನಡುವೆ ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷಿತ ನಾಯಕರು ಈಗಾಗಲೇ ದೆಹಲಿಗೆ ತಲುಪಿದ್ದಾರೆ ಎನ್ನಲಾಗಿದೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮೋದಿ ಸಂಪುಟಕ್ಕೆ ನಡೆಯುತ್ತಿರುವ ಸಂಪುಟ ವಿಸ್ತರಣೆ ಇದಾಗಿದೆ. ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿಯ ಸಂಪುಟ ವಿಸ್ತರಣೆ ಬಗ್ಗೆ ಕುತೂಹಲ ಕೆರಳಿದೆ.
ಲಭ್ಯ ಮಾಹಿತಿಗಳ ಪ್ರಕಾರ ಸರ್ಬಾನಂದ ಸೊನೊವಾಲ್, ಜ್ಯೋತಿರಾಧಿತ್ಯ ಸಿಂಧ್ಯಾ, ನಾರಾಯಣ್ ರಾಣೆ ಸಂಪುಟ ಸೇರುವುದು ಖಚಿತ ಎನ್ನಲಾಗಿದ್ದು, ಡಿವಿಎಸ್ ಅವರನ್ನು ಸಂಪುಟದಿಂದ ಕೈ ಬಿಟ್ಟು ಕರ್ನಾಟಕದ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಗಳಿದೆ.
ಪ್ರಸ್ತುತ, ಕೇಂದ್ರ ಸರ್ಕಾರದಲ್ಲಿ 21 ಸಂಪುಟ ಸಚಿವರು, ಮಂತ್ರಿಗಳು, ಸ್ವತಂತ್ರ ಉಸ್ತುವಾರಿ ಹೊಂದಿರುವ 9 ಮಂತ್ರಿಗಳು ಮತ್ತು 23 ರಾಜ್ಯ ಸಚಿವರ ಇದ್ದಾರೆ. ಇಂದು ವಿಸ್ತರಣೆ ನಂತರ ಸಚಿವರ ಸಂಖ್ಯೆ 81ಕ್ಕೆ ಎರುವ ಸಾಧ್ಯತೆಗಳಿದೆ.
Discussion about this post