ಕೇರಳದಲ್ಲಿ ಹರಿದ ಪ್ರವಾಹ ಕಣ್ಣೀರು ತರಿಸಿದರೆ, ಜನ ಚಾಚುತ್ತಿರುವ ಸಹಾಯ ಹಸ್ತ ನೋಡಿ ಆನಂದ ಭಾಷ್ಪ ಸುರಿಯುತ್ತದೆ. ಒಂದೆಡೆ ವೀರ ಸೈನಿಕರ ರಕ್ಷಣಾ ಕಾರ್ಯಾಚರಣೆ, ಮತ್ತೊಂದು ಕಡೆ ಊಹೆಗೂ ನಿಲುಕದ ಸಹಾಯ ಮನೋಭಾವನೆ.
ಸಹಾಯ ಹಸ್ತ ಚಾಚಿದವರ ಒಂದೊಂದು ಕಥೆಯೂ ಭಿನ್ನ. ಇದರಲ್ಲಿ ತಮಿಳುನಾಡಿನ 8 ವರ್ಷದ ಹುಡುಗಿಯ ತ್ಯಾಗ ಮನೋಭಾವಕ್ಕೊಂದು ಸೆಲ್ಯೂಟ್ ಹೇಳಲೇಬೇಕು.
ತಮಿಳುನಾಡು ವಿಲ್ಲುಪುರಂನ 8 ವರ್ಷದ ಹುಡುಗಿ ಅನುಪ್ರಿಯ ಸೈಕಲ್ ಖರೀದಿಸಬೇಕು ಎಂದು ಸಾಕಷ್ಟು ದಿನಗಳಿಂದ ಕನಸು ಕಂಡಿದ್ದಳು. ಇದಕ್ಕಾಗಿ ಆಕೆ ಹಲವು ದಿನಗಳಿಂದ ಕಾಸು ಸಂಗ್ರಹಿಸಿಕೊಂಡು ಬಂದಿದ್ದಳು. ಆದರೆ ಕೇರಳದಲ್ಲಿ ನೆರೆ ಬಂದಿರುವ ಸುದ್ದಿ ಪುಟ್ಟ ಬಾಲಕಿಯ ಮನಸ್ಸಿಗೆ ತಟ್ಟಿತು.
ಹೀಗಾಗಿ ಎರಡನೇ ತರಗತಿಯ ಪುಟ್ಟ ಹುಡುಗಿ ಸೈಕಲ್ ಮತ್ತೊಮ್ಮೆ ತೆಗೆದುಕೊಳ್ಳಬಹುದು ಎಂದು ನಿರ್ಧರಿಸಿ, ತಾನು ನಾಲ್ಕು ವರ್ಷಗಳಿಂದ ಕೂಡಿಟ್ಟ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಡಲು ನಿರ್ಧರಿಸಿದಳು.ತಂದೆ ಕೆಸಿ ಷಣ್ಮುಗನಾಥನ್ ಮತ್ತು ತಾಯಿ ಲಲಿತಾರಿಗೆ ತನ್ನ ನಿರ್ಧಾರವನ್ನು ತಿಳಿಸಿದಳು.
ಪುಟ್ಟ ಹುಡುಗಿಯ ನಿರ್ಧಾರ ವೈರಲ್ ಆಗುತ್ತಿದ್ದಂತೆ ಹೀರೋ ಸೈಕಲ್ ಕಂಪನಿ ಅನುಪ್ರಿಯಳಿಗೆ ತಾನೇ ಬೆಸ್ಟ್ ಸೈಕಲ್ ಕೊಡುವುದಾಗಿ ಹೇಳಿತು.
ಅತ್ತ ಹುಡುಗಿ ಕೂಡಿಟ್ಟ ಕಾಸು ಕೇರಳ ತಲುಪುತ್ತಿದ್ದಂತೆ ಹುಡುಗಿಯ ಕುಟುಂಬವನ್ನು ಸಂಪರ್ಕಿಸಿದ ಹಿರೋ ಸೈಕಲ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಮನೋಜ್ ಕುಮಾರ್ ಅನುಪ್ರಿಯಾಳಿಗೆ ಸೈಕಲ್ ಒಂದನ್ನು ಕೊಡಿಸಿದ್ದಾರೆ.
Discussion about this post