ಚೆನ್ನೈ : ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಮರೆತಿರುವ ರಾಜಕೀಯ ಪಕ್ಷಗಳು, ಜಾತಿ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಲಾರಂಭಿಸಿದೆ. ಒಡೆದು ಆಳುವ ನೀತಿಗೆ ಮುಂದಾಗುವ ರಾಜಕೀಯ ನೇತಾರರು ತಮ್ಮ ಕಾಲ ಬುಡದಲ್ಲೇ ತಾವೇ ಹಳ್ಳ ತೋಡಿಕೊಳ್ಳುತ್ತಿದ್ದಾರೆ.
ಈ ನಡುವೆ ತಮಿಳುನಾಡಿನ ಆಧೀನಂ ಪೀಠದಲ್ಲಿ ಸ್ವಾಮೀಜಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸುವುದನ್ನು ತಮಿಳುನಾಡು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರ ಬಿಜೆಪಿಗೆ ಆಸ್ತ್ರವಾಗಿ ಪರಿಣಮಿಸಿದರೆ, ಸ್ವಾಮೀಜಿಗಳು ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವಿರುದ್ಧ ಬೀದಿಗಿಳಿವ ಎಚ್ಚರಿಕೆಯನ್ನೂ ಕೂಡಾ ನೀಡಲಾಗಿದೆ.
ಮನುಷ್ಯರೊಬ್ಬರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಅದನ್ನು ಭಕ್ತರು ಹೊರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಕೆಲ ಸಂಘಟನೆಗಳು ಸರ್ಕಾರಕ್ಕೆ ದೂರು ಸಲ್ಲಿಸಿತ್ತು. ಈ ದೂರಿನ ಆಧಾರದಲ್ಲಿ ಸರ್ಕಾರ ಇದೀಗ ಪಲ್ಲಕ್ಕಿ ಹೊರುವುದನ್ನು ನಿಷೇಧಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಹಿಂದೂ ಧಾರ್ಮಿಕ ಆಚರಣೆಗಳಿಗೆ ಸ್ಟಾಲಿನ್ ಅಡ್ಡಿಯಾಗಿದ್ದಾರೆ. ನಿಷೇಧ ಆದೇಶವನ್ನು ಹಿಂಪಡೆಯದಿದ್ರೆ ನಾನೇ ಪಲ್ಲಕ್ಕಿ ಹೊರುತ್ತೇನೆ ಅಂದಿದ್ದಾರೆ. ಜೊತೆಗೆ ಬೆಳವಣಿಗೆ ಬಗ್ಗೆ ಮದುರೈ ಆಧೀನಂ ಪೀಠಾಧಿಪತಿ ಜ್ಞಾನಸಂಬಂಧ ದೇಶಿಕ ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದು “ ಬ್ರಿಟಿಷರೇ ಈ ಆಚರಣೆಗೆ ಅಡ್ಡಿ ಮಾಡಿರಲಿಲ್ಲ” ಅಂದಿದ್ದಾರೆ. ಹಾಗೇ ನೋಡಿದರೆ ತಮಿಳುನಾಡು ಸರ್ಕಾರದ್ದು ಎಡವಟ್ಟಿನ ನಿರ್ಧಾರ, ಪಲ್ಲಕ್ಕಿ ಹೊರುವವರು ಈ ಬಗ್ಗೆ ದೂರು ಸಲ್ಲಿಸಿದ್ರೆ ಸರ್ಕಾರ ಮಧ್ಯ ಪ್ರವೇಶ ಮಾಡುವುದರಲ್ಲಿ ಅರ್ಥವಿತ್ತು. ಪಲ್ಲಕ್ಕಿ ಹೊರುವವರಿಗೆ ಸಮಸ್ಯೆ ಇಲ್ಲ ಅಂದ ಮೇಲೆ ಆದ್ಯಾಕೆ ಸ್ಟಾಲಿನ್ ಈ ಬಗ್ಗೆ ಕಾಳಜಿ ವಹಿಸಿದ್ರು ಅನ್ನುವುದೇ ಯಕ್ಷ ಪ್ರಶ್ನೆ
Discussion about this post