ಅರುಣ್ ಕುಮಾರ್ ಪುತ್ತಿಲ ( Arun kumar puthila )ಸ್ಪರ್ಧೆಯಿಂದ, ಸುಲಭ ಜಯದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಆತಂಕ ಎದುರಾಗಿದೆ. ಈಗಾಗಲೇ ಪುತ್ತಿಲ ಗೆಲುವಿಗೆ ಪುತ್ತೂರಿನ ಬಿಜೆಪಿ ಕಾರ್ಯಕರ್ತರೇ ಮುಂದಾಗಿದ್ದಾರೆ
ಪುತ್ತೂರು : 2023ರ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ( Arun kumar puthila) ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಪುತ್ತೂರಿನಲ್ಲಿ ಬುಧವಾರ ಬೆಂಬಲಿಗರ ಸಭೆ ನಡೆಸಿದ್ದ ಅರುಣ್ ಕುಮಾರ್ ಪುತ್ತಿಲ ಅಭಿಪ್ರಾಯ ಸಂಗ್ರಹಿಸಿದ್ದರು. ಈ ವೇಳೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಅಪಾರ ಅಭಿಮಾನಿಗಳು ತಮ್ಮ ಅಭಿಪ್ರಾಯ ಸ್ಪಷ್ಟ ಪಡಿಸುವಂತೆ ಒತ್ತಾಯಿಸಿದ್ರು ಪುತ್ತಿಲ ತಮ್ಮ ನಿರ್ಧಾರ ಪ್ರಕಟಿಸಿರಲಿಲ್ಲ.
ಗುರುವಾರ ಅನೇಕ ಹಿರಿಯರೊಂದಿಗೆ ಸೋಲು ಗೆಲುವಿನ ಲೆಕ್ಕಚಾರದ ಬಗ್ಗೆ ಮಾತುಕತೆ ನಡೆಸಿದ ಅರುಣ್ ಪುತ್ತಿಲ, ತಡ ರಾತ್ರಿ ಪಕ್ಷೇತರರಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.( Arun kumar puthila)
ಈ ಬಗ್ಗೆ ಅಭಿಮಾನಿಗಳಿಗೆ ಸಂದೇಶ ಕಳುಹಿಸಿರುವ ಅವರು , ಪುತ್ತೂರಿನ ನನ್ನ ಆತ್ಮೀಯ ಬಂಧುಗಳೇ, ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇದೇ ಬರುವ ಏಪ್ರಿಲ್ 17 ಸೋಮವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ನಿಮ್ಮೆಲ್ಲರ ಆಶೀರ್ವಾದದಿಂದ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ.ನಾಮಪತ್ರ ಸಲ್ಲಿಕೆಗೆ ಪೂರ್ವದಲ್ಲಿ 9 ಗಂಟೆಗೆ ಸರಿಯಾಗಿ ಪುತ್ತೂರು ಮಹಾತೋಭಾರ ದೇವಸ್ಥಾನದಲ್ಲಿ ವಿಶೇಷ ಪ್ರಾಥ೯ನೆಯನ್ನ ಸಲ್ಲಿಸಿ 10 ಗಂಟೆಗೆ ಪುತ್ತೂರಿನ ಧಬೆ೯ ವ್ರತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದವರೆಗೆ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ತಾಲೂಕಿನ ನನ್ನೆಲ್ಲಾ ಬಂಧುಗಳು ಆಗಮಿಸಿ ನನ್ನನ್ನು ಆಶೀರ್ವದಿಸಬೇಕಾಗಿ ವಿನಂತಿಸುತ್ತಿದ್ದೇನೆ. ಅಂದಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಪುತ್ತೂರು ಚುನಾವಣಾ ಕಣದಲ್ಲಿ ಸಂಚಲನ ಮೂಡುವುದು ಖಂಡಿತಾ. ಪುತ್ತೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪಗೌಡ ಅವರ ಹೆಸರು ಪ್ರಕಟಗೊಂಡ ವೇಳೆ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಸುಲಭವಾಗಿ ಜಯ ಸಾಧಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಪುತ್ತೂರಿನಂತ ಕ್ಷೇತ್ರಕ್ಕೆ ಖಡಕ್ಕ್ ಅಭ್ಯರ್ಥಿ ಬೇಕಾಗಿತ್ತು. ಹೊಸ ಮುಖವಾದರೂ ಯುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತಿದ್ರೆ ಕಾರ್ಯಕರ್ತರಲ್ಲಿ ಹುರುಪು ತರಬಹುದಿತ್ತು. ಆದರೆ ಆಶಾ ತಿಮ್ಮಪ್ಪಗೌಡ ಅವರ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನೋಟಾಗೆ ನಮ್ಮ ವೋಟು ಅಂದಿದ್ದರು. ಇದರಿಂದ ಕಾಂಗ್ರೆಸ್ ಪಾಳಯದಲ್ಲಿ ಗೆಲುವಿನ ಹುಮ್ಮಸ್ಸು ವ್ಯಕ್ತವಾಗಿತ್ತು.
ಆದರೆ ಈಗ ಅರುಣ್ ಕುಮಾರ್ ಪುತ್ತಿಲ ಅವರ ರಂಗಪ್ರವೇಶದಿಂದ ಚುನಾವಣಾ ಕಣಕ್ಕೆ ರಂಗು ಬಂದಿದೆ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿಯಿಂದ ಹೊರದಬ್ಬಲ್ಪಟ್ಟ ಕಾರ್ಯಕರ್ತರು ಪುತ್ತಿಲ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಸಂದರ್ಭದಲ್ಲಿ ಸಿಡೆದೆದ್ದಿರುವ ಯುವ ಪಡೆ ಕೂಡಾ ಪುತ್ತೂರಿಗೆ ಪುತ್ತಿಲ ಅಂದಿದೆ.
ಇನ್ನು ಪುತ್ತೂರು ಬಿಜೆಪಿಯ ಬೂತ್ ಮಟ್ಟದ ಪದಾಧಿಕಾರಿಗಳು ಕೂಡಾ ದೊಡ್ಡ ಸಂಖ್ಯೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ನೇರವಾಗಿ ತಮ್ಮ ಬೆಂಬಲ ಘೋಷಿಸಿದ್ದಾರೆ. ಈ ಎಲ್ಲಾ ಕಾರಣಗಳು ನೇರವಾಗಿ ಕಾಂಗ್ರೆಸ್ ಮತ ಬೇಟೆಯ ಮೇಲೆ ಪರಿಣಾಮ ಬೀರಲಿದೆ. ಅಷ್ಟೇ ಮಾಜಿ ಶಾಸಕ ಸಂಜೀವ ಮಠಂದೂರು ಬೆಂಬಲಿಗರು ಕೂಡಾ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪಾಠ ಕಲಿಸೋಣ ಅನ್ನುವ ಸಾಧ್ಯತೆಗಳು ಇಲ್ಲದಿಲ್ಲ. ಜೊತೆಗೆ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಕೆಲ ತಿಂಗಳ ಹಿಂದಿನ ತನಕ ಬಿಜೆಪಿಯಲ್ಲಿದ್ದರು. ಮಾತ್ರವಲ್ಲದೆ ಕರಾವಳಿಯ ಅನೇಕ ಬಿಜೆಪಿ ನಾಯಕರ ರೈಟ್ ಹ್ಯಾಂಡ್ ಅನ್ನಿಸಿಕೊಂಡಿದ್ದರು. ಹೀಗಾಗಿ ಬಿಜೆಪಿ ನಾಯಕರೇ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ ಅನ್ನುವ ಆಕ್ರೋಶ ಬಿಜೆಪಿ ಕಾರ್ಯಕರ್ತರಲ್ಲಿದೆ.
ಇದರೊಂದಿಗೆ ಪುತ್ತೂರಿನಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ಅನ್ನು ದೊಡ್ಡ ಮಟ್ಟದಲ್ಲಿ SDPI ಕಸಿದುಕೊಳ್ಳಲಿದೆ. ಈ ಎಲ್ಲಾ ಫ್ಯಾಕ್ಟರ್ ಗಳನ್ನು ಗಮನಿಸಿದರೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯೇ ನೇರ ಎದುರಾಳಿಯಾಗೋ ಸಾಧ್ಯತೆಗಳಿದೆ. ಹಾಗಾದ್ರೆ ಪುತ್ತೂರು ಕ್ಷೇತ್ರದಲ್ಲಿ ಉರಿಮಜಲು ರಾಮಭಟ್ಟರ ನಂತರ ಅರುಣ್ ಕುಮಾರ್ ಪುತ್ತಿಲ ಬಂಡಾಯ ಬಾವುಟ ಹಾರಿಸಿದಂತಾಗುತ್ತದೆ.
ಹಾಗಾದ್ರೆ ಪುತ್ತಿಲ ಗೆಲುವು ಸುಲಭವೇ, ಖಂಡಿತಾ ಅಲ್ಲ, ಅರುಣ್ ಕುಮಾರ್ ಪುತ್ತಿಲ ಬಳಗ ರಾಜಕೀಯ ಪಟ್ಟುಗಳನ್ನು ಸರಿಯಾಗಿ ಬಳಸದೇ ಹೋದ್ರೆ ಗೆಲುವು ಸಾಧ್ಯವಿಲ್ಲ. ದಕ್ಷಿಣ ಕನ್ನಡದ ಪುತ್ತಿಲ ಅಭಿಮಾನಿಗಳು ಪುತ್ತಿಲ ಪರ ಪ್ರಚಾರಕ್ಕೆ ಪುತ್ತೂರಿಗೆ ಬಂದರೆ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಬಹುದು.
Discussion about this post