ಮಂಗಳೂರು : ಹಿಂದೂ ಮುಖಂಡರನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಅವರನ್ನು ಕೈ ಬಿಡಲಾಗುತ್ತಿದೆ. ಈ ಮೂಲಕ ಹಿಂದೂ ಹೋರಾಟಗಾರರನ್ನು ತುಳಿಯಲಾಗುತ್ತಿದೆ ಎಂದು ಹಿಂದೂ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.
ಮಂಗಳೂರಿನ ಸ್ಥಳೀಯ ಖಾಸಗಿ ವಾಹಿನಿ Daijiworld ಜೊತೆಗೆ ಮಾತನಾಡಿರುವ ಅವರು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ನಡೆ ನುಡಿಯನ್ನು ಖಂಡಿಸಿರುವ ಅವರು ಹಿಂದೂ ಕಾರ್ಯಕರ್ತರು, ಹಿಂದೂ ಸಂಘಟನೆ ಮುಖಂಡರನ್ನು ಬಳಸಿ ಬಿಸಾಡಲಾಗುತ್ತಿದೆ. ನನಗೂ ಇದೇ ಪರಿಸ್ಥಿತಿ ಬಂತು. ರಾಜಕೀಯವಾಗಿ ನನ್ನ ಬೆಳೆಸುತ್ತೇವೆ ಎಂದು ಹೇಳಿ ಮೋಸ ಮಾಡಲಾಯ್ತು. ಹಿಂದುಳಿದ ವರ್ಗದವರದ್ದೂ ಇದೇ ಕಥೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಘಟನೆಯಲ್ಲಿ ಮೇಲ್ ವರ್ಗದವರು ಬೆಳೆಯುತ್ತಿದ್ದಾರೆ. ಆದರೆ ತಳಮಟ್ಟದಲ್ಲಿರುವ ಮಂದಿ ಸೈಡ್ ಲೈನ್ ಆಗುತ್ತಿದ್ದಾರೆ ಅಂದಿರುವ ಸತ್ಯಜಿತ್, ನನ್ನ ಸ್ಥಿತಿ ಶರಣ್ ಪಂಪ್ ವೆಲ್ ಅವರಿಗೂ ಬರಲಿದೆ ಅಂದಿದ್ದಾರೆ. ಈಗಾಗಲೇ ಮಾನಸಿಕವಾಗಿ ಕುಗ್ಗಿರುವ ಅವರಿಗೂ ಸತ್ಯ ಅರಿವಾಗಲಿದೆ ಅಂದಿದ್ದಾರೆ.
ಹಿಂದುತ್ವ ಹೋರಾಟಗಾರ ಮತ್ತು ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ ಅನ್ನುವುದಕ್ಕೆ ಪ್ರಮೋದ್ ಮುತಾಲಿಕ್, ಅರುಣ್ ಪುತ್ತಿಲ, ಪ್ರವೀಣ್ ವಾಲ್ಕೆ ,ಪ್ರಸಾದ್ ಅತ್ತಾವರ ಹೆಸರುಗಳೇ ಸಾಕ್ಷಿ. ಹೀಗಾಗಿ ಹಿಂದುತ್ವ ಹೋರಾಟಕ್ಕೆ ಇಳಿಯುವ ಮುನ್ನ ನಿಮ್ಮ ಜೀವನದ ವ್ಯವಸ್ಥೆ, ನಿಮ್ಮ ಮನೆಯ ವ್ಯವಸ್ಥೆ ಚೆನ್ನಾಗಿ ಮಾಡಿಕೊಳ್ಳಿ, ಯಾರನ್ನೋ ನಂಬಿಕೊಂಡು ಹೋರಾಟಕ್ಕೆ ಇಳಿಯಬೇಡಿ ಎಂದು ಇದೇ ವೇಳೆ ಸತ್ಯಜಿತ್ ಯುವ ಹೋರಾಟಗಾರರಿಗೆ ಸಲಹೆ ನೀಡಿದ್ದಾರೆ.
Discussion about this post