ಇಡುಕ್ಕಿ : ಕೇರಳದಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ಹಲವು ಜಿಲ್ಲೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಮತ್ತೊಂದು ಕಡೆ ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕ್ಕಲ್ ಪಂಚಾಯತ್ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿದ್ದು, ಮೂರು ಮನೆಗಳು ಕೊಚ್ಚಿಕೊಂಡು ಹೋಗಿದೆ. ಇದೇ ವ್ಯಾಪ್ತಿಯಲ್ಲಿ ಮೂರು ಮಂದಿಯ ಶವಗಳನ್ನು ಹೊರತೆಗೆಯಲಾಗಿದ್ದು, ಈವರೆಗೆ ಮಳೆ ಅವಘಡಕ್ಕೆ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಈ ಪೈಕಿ ಒಂದೇ ಕುಟುಂಬದ 6 ಮಂದಿಯ ಪೈಕಿ ಮೂರು ಜನ ಮೃತಪಟ್ಟಿದ್ದಾರೆ.
ಈಗಾಗಲೇ 18 ಮಂದಿ ನಾಪತ್ತೆಯಾಗಿರುವ ವರದಿಗಳು ಬಂದಿದ್ದು, ಇದರಲ್ಲಿ 5 ಮಂದಿ ಮಕ್ಕಳು ಸೇರಿದ್ದಾರೆ. ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಯಲ್ಲಿ ಸರಣಿ ಭೂಕುಸಿತ, ಗುಡ್ಡ ಕುಸಿತ ಮುಂದುವರಿದಿದೆ. ಕಾಣೆಯಾದವರಿಗೆ ಶೋಧ ಕಾರ್ಯ ಮುಂದುವರಿದಿದ್ದು, ಸುರಿಯುತ್ತಿರುವ ಭಾರೀ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಘಟನಾ ಸ್ಥಳದಲ್ಲಿ NDRF ಹಾಗೂ ಶ್ವಾನ ದಳ ಬೀಡು ಬಿಟ್ಟಿದೆ.
ಪ್ರಸ್ತುತ ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಕೊಚ್ಚಿಯಲ್ಲಿ ನೌಕಾಪಡೆ ಸನ್ನದ್ಧ ಸ್ಥಿತಿಯಲ್ಲಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಜ ಜೊತೆ ಸತತ ಸಂಪರ್ಕದಲ್ಲಿದೆ.
ಇನ್ನು ಮ್ಯಾಥಮನ್, ಕಲ್ಲುಪ್ಪರ, ತುಂಪಮಾನ್, ಪುಲ್ಲಕಾಯರ್, ಮಾಣಿಕ್ಕಲ್, ವೆಲ್ಲೈಕಡವು ಮತ್ತು ಅರುವಿಪುರಂ ಅಣೆಕಟ್ಟುಗಳಲ್ಲಿ ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು ಯಾವುದೇ ಕ್ಷಣದಲ್ಲೂ ಅಪಾಯ ಸ್ಫೋಟಿಸುವ ಸಾಧ್ಯತೆಗಳಿದೆ.
Discussion about this post