ಕೇರಳದಲ್ಲಿ ಮಳೆಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಾನಂಗಳದಲ್ಲಿ ಸೂರ್ಯನ ಕಿರಣಗಳು ಕಾಣಿಸಿಕೊಳ್ಳುವ ಲಕ್ಷಣ ತೋರುತ್ತಿದೆ.ಆದರೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಬದುಕಿನಲ್ಲಿ ಭರವಸೆಯ ಕಿರಣಗಳು ಮೂಡುವುದು ಯಾವಾಗ.
ನಿರಾಶ್ರಿತರ ಕೇಂದ್ರದಲ್ಲಿ ಕೂತವರ ಮನಸ್ಸಿನಲ್ಲಿ ಅವರ ಮನೆಯ ಚಿತ್ರ ಓಡುತ್ತಿದೆ. ಮುಂದೇನು..ಬದುಕು ಕಟ್ಟುವುದು ಹೇಗೆ ಅನ್ನುವ ಚಿಂತೆ ಕಾಡುತ್ತಿದೆ.ಈ ನಡುವೆ ತಮ್ಮ ನೋವು ಮರೆಯುವ ಪ್ರಯತ್ನ ಕೂಡಾ ನಿರಾಶ್ರಿತರ ಕೇಂದ್ರದಲ್ಲಿ ಸಾಗಿದೆ.
ನೋವಿನ ನಡುವೆ ತನ್ನ ಪಕ್ಕದಲ್ಲಿರುವ ನಿರಾಶ್ರಿತನನ್ನು ಖುಷಿಯಾಗಿಡಬೇಕು ಎಂದು ಪ್ರತಿಯೊಬ್ಬರು ಬಯಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕೊಚ್ಚಿಯ ಕ್ಯಾಂಪ್ ಒಂದರಲ್ಲಿ ವಯೋ ವೃದ್ಧರು ತಮಿಳು ಹಾಡಿಗೆ ನೃತ್ಯ ಮಾಡುವ ದೃಶ್ಯ ವೈರಲ್ ಆಗಿದೆ. ‘ಜಿಲ್ಲಾ’ ಚಿತ್ರದ ಹಾಡಿಗೆ ನೃತ್ಯ ಮಾಡುವ ಮೂಲಕ ಕ್ಯಾಂಪ್ ನಲ್ಲಿರುವ ಪ್ರತಿಯೊಬ್ಬರ ಮುಖದ ನೋವು ಒಂದು ಕ್ಷಣ ಮರೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಇದು ಒಂದು ಕಡೆಯಾದರೆ ಚೆರ್ನಲ್ಲೂರು ಕ್ಯಾಂಪ್ ನಲ್ಲೂ ಜಿಮ್ಕಿ ಕಮಾಲ್ ಹಾಡಿಗೆ ಮಹಿಳೆಯೊಬ್ಬರು ಮಕ್ಕಳೊಂದಿಗೆ ನೃತ್ಯ ಮಾಡಿದ್ದಾರೆ. ಮನೆ ಮಠ ಕಳೆದುಕೊಂಡ ಮಕ್ಕಳು ನೋವಿನ ಕ್ಷಣಗಳನ್ನು ಮರೆಯಲಿ ಅನ್ನುವುದು ಈ ಡ್ಯಾನ್ಸ್ ಉದ್ದೇಶವಾಗಿತ್ತು.
ಚೆರ್ನಲ್ಲೂರು ಕ್ಯಾಂಪ್ ವಿಡಿಯೋ ಅನ್ನು ಶೇರ್ ಮಾಡಿರುವ ಐಎಎಸ್ ಅಧಿಕಾರಿ ಪ್ರಶಾಂತ್ ನಾಯರ್ ( ಮಲಿಯಾಳಿಗಳ ಪಾಲಿಗೆ ಪ್ರಶಾಂತ್ Collector Bro ಎಂದೇ ಪ್ರಸಿದ್ಧರು) “ ನಿರಾಶ್ರಿತರ ಕ್ಯಾಂಪ್ ಗಳಿಗೆ ಇದೀಗ ಕೇರಳ ಮಾದರಿಯಾಗಿದೆ. ನೋವುಗಳನ್ನು ನುಂಗಿ ಕೊರಗುವ ಬದಲು ಹೀಗೆ ಸಂತೋಷ ತರಿಸುವ ಮೂಲಕ ನೋವನ್ನು ಮರೆಯಬಹುದಾಗಿದೆ” ಎಂದಿದ್ದಾರೆ.
ಈ ವಿಡಿಯೋ ನೋಡಿ ಕೇರಳ ಮಂದಿ ಎಷ್ಟು ಖುಷಿಯಾಗಿದ್ದಾರೆ, ಅವರಲ್ಲಿ ಪ್ರವಾಹದ ನೋವೇ ಇಲ್ಲ ಎಂದು ಟೀಕಿಸುವ ಮಂದಿ ಸಾಕಷ್ಟಿರುತ್ತಾರೆ. ಆದರೆ ಒಂದು ನೆನಪಿಡಿ ಅವರೆಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾರೆ ಅಂದರೆ ಕೇರಳ ಸಹಜ ಸ್ಥಿತಿಗೆ ಮರಳಿದೆ ಎಂದರ್ಥವಲ್ಲ. ಹಾಡು ಡ್ಯಾನ್ಯ್ ಮೂಲಕ ನೋವನ್ನು ಮರೆಯುವ ಪ್ರಯತ್ನ ಅವರು ಮಾಡುತ್ತಿದ್ದಾರೆ. ಹೀಗೆ ನೋವಲ್ಲೇ ಕೊರಗಿ ಕೂತರೆ ನಾಳೆ ಅವರು depressionಗೆ ಹೊರಟು ಹೋಗ್ತಾರೆ. ಮತ್ತೆ ಜೀವನ ಪೂರ್ತಿ ಹಾಗೇ ಇರಬೇಕಾದಿತು. ಬದಲಿಗೆ ಹೀಗೆ ನೋವಿನಲ್ಲೂ ಕುಣಿಯುತ್ತಿದ್ದರೆ ಹೊಸ ಬದುಕು ಕಟ್ಟುವ ಛಲ ಬರುತ್ತದೆ.
Discussion about this post