ಸರ್ಕಾರಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿದ್ರೆ ಜನ ಅದೆಷ್ಟು ಪ್ರೀತಿಸುತ್ತಾರೆ ಅನ್ನುವುದಕ್ಕೆ Savitha kundar ಉದಾಹರಣೆ
ಉಡುಪಿ : ಸರ್ಕಾರಿ ಅಧಿಕಾರಿಗಳು ಅಂದ್ರೆ ಜನರಲ್ಲಿ ಅಸಡ್ಡೆ ಅಸಹ್ಯ ಮೂಡಿದೆ. ಅವರ ಲಂಚದ ದಾಹಕ್ಕೆ ಜನ ಸುಸ್ತಾಗಿ ಹೋಗಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಜನ ಮೂಗು ಮುರಿಯುತ್ತಾರೆ. ಅಲ್ಲಿನ ಅವ್ಯವಸ್ಥೆಗಳೇ ಜನರಲ್ಲಿ ಹೀಗೆ ಭಾವನೆ ಮೂಡಿಸುವಂತೆ ಮಾಡಿದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಸಾಕಷ್ಟು ಸುಧಾರಣೆ ಕಂಡಿದೆ. ( Savitha kundar)
ಈ ನಡುವೆ ಗ್ರಾಮದ ವೈದ್ಯಾಧಿಕಾರಿಯೊಬ್ಬರು ವರ್ಗಾವಣೆಯಾಗಿ ಹೋಗುತ್ತಿದ್ದಾರೆ ಅನ್ನುವ ಸುದ್ದಿ ಕೇಳಿ ಇಡೀ ಗ್ರಾಮವೇ ಕಣ್ಣೀರು ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ಗ್ರಾಮೀಣ ಪ್ರದೇಶ ಆವರ್ಸೆ ( avarse) ಗ್ರಾಮದಲ್ಲಿ ನಡೆದಿದೆ. ಯುವ ವೈದ್ಯಯೊಬ್ಬಳು ಇಲ್ಲಿ ಇರೋದಿಲ್ಲ ಅನ್ನು ಸುದ್ದಿ ಕೇಳಿ ಹಿರಿಯ ಜೀವಗಳು ಸಿಕ್ಕಾಪಟ್ಟೆ ನೊಂದುಕೊಂಡರೆ, ಕೆಲವರು ವೈದ್ಯರ ಕಾಲಿಗೆ ಎರಗಿ ನಮ್ಮ ಬಿಟ್ಟು ಹೋಗಬೇಡಿ ಅಂದಿದ್ದಾರೆ.
ಇದನ್ನು ಓದಿ : Umesh katti : ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಸಿದ ಉಮೇಶ್ ಕತ್ತಿ
ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸವಿತಾ ಕುಂದರ್ ( avarse savitha) ಕಳೆದ 12 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.MBBS ಪದವಿ ಪೂರೈಸಿದ ಬಳಿಕ ಗ್ರಾಮಾಂತರ ಪ್ರದೇಶ ಆವರ್ಸೆಯಲ್ಲಿ ಸೇವೆ ಆರಂಭಿಸಿದ್ದ ಇವರು ಆವರ್ಸೆ, ಹಿಲಿಯಾಣ, ನಂಚಾರು, ವಂಡಾರು ಹೀಗೆ ಗ್ರಾಮಾಂತರದ ಜನರ ಪಾಲಿಗೆ ದೇವರಾಗಿ ಹೋಗಿದ್ದರು.
ಆಸ್ಪತ್ರೆಗೆ ಬಂದವರ ಪಾಲಿಗೆ ಸವಿತಾ ವೈದ್ಯೆಯಾಗಿರಲಿಲ್ಲ, ಹಲವರಿಗೆ ಮಗಳಾಗಿದ್ದಳು, ಮತ್ತೆ ಕೆಲವರಿಗೆ ಅಕ್ಕ ಆಗಿದ್ದರು, ಮತ್ತೊಂದಿಷ್ಟು ಮಂದಿಗೆ ತಂಗಿಯಾಗಿದ್ದರು, ಅಷ್ಟೇ ಯಾಕೆ ಕೆಲವರ ಪಾಲಿಗೆ ಸವಿತಾ ಕುಂದರ್ ಮಾತೃ ವಾತ್ಸಾಲ್ಯ ಹಂಚಿದ್ದು ಕೂಡಾ ಇದೆ.
ಬ್ರಹ್ಮಾವರ ತಾಲೂಕಿನ ಸಾಸ್ತಾನದವರಾಗಿರುವ ಡಾ.ಸವಿತಾ ಆವರ್ಸೆಯ ಬಳಿಕ ಇದೀಗ ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.
12 ವರ್ಷಗಳಿಂದ ಆವರ್ಸೆಯಲ್ಲಿ ಸೇವೆ ಸಲ್ಲಿಸಿರುವ ಡಾ.ಸವಿತಾ ರಾತ್ರಿ ಹಗಲೆನ್ನದೆ ಸೇವೆ ನೀಡುತ್ತಿದ್ದವರು. ಪ್ರತಿದಿನ 150ಕ್ಕೂ ಮಿಕ್ಕಿ ರೋಗಿಗಳ ಪರೀಕ್ಷೆ ನಡೆಸುತ್ತಿದ್ದರು. ಇಷ್ಟೆಲ್ಲಾ ಒತ್ತಡದ ನಡುವೆ ಆರೋಗ್ಯ ಜಾಗೃತಿಗಾಗಿ ಹಳ್ಳಿ ಹಳ್ಳಿಯ ಮನೆ ಮನೆಗು ಭೇಟಿ ಕೊಡುತ್ತಿದ್ದ ಸವಿತಾ ಇಡೀ ಗ್ರಾಮದ ಮಗಳಾಗಿದ್ದರು.
ಇನ್ನು ಗ್ರಾಮಸ್ಥರ ಪ್ರೀತಿಯ ಬಗ್ಗೆ ಮಾತನಾಡಿರುವ ಸವಿತಾ ತೀರಾ ಗ್ರಾಮಾಂತರ ಪ್ರದೇಶದಿಂದ ಬಂದವಳು ನಾನು, ಗ್ರಾಮದದಲ್ಲೇ ಸೇವೆ ಸಲ್ಲಿಸುವ ಅವಕಾಶ ಸಿಕ್ತು. ಜನರ ಪ್ರೀತಿಗೆ ತಲೆ ಬಾಗಿದ್ದೇನೆ. ಸರಕಾರದ ಆದೇಶ ಪಾಲಿಸುವುದು ನನ್ನ ಕರ್ತವ್ಯ. ಹಾಗಿದ್ದರೂ ಆವರ್ಸೆ ಆರೋಗ್ಯ ಕೇಂದ್ರಕ್ಕೆ ವಾರದಲ್ಲೊಂದು ದಿನ ಹೊರರೋಗಿಗಳ ತಪಾಸಣೆಗೆ ಬರುವ ಭರವಸೆ ನೀಡಿದ್ದೇನೆ ಅಂದಿದ್ದಾರೆ.
ಒಟ್ಟಿನಲ್ಲಿ ಉತ್ತಮ ಸೇವೆ ನೀಡಿದರೆ ಜನರು ವೈದ್ಯರನ್ನು ದೇವರಂತೆ ಪೂಜಿಸುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಹಲವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ದೊರಕದ ವೈದ್ಯರಿದ್ದಾರೆ. ಅವರೆಲ್ಲರಿಗೂ ಸವಿತಾ ಕುಂದರ್ ಮಾದರಿಯಾಗಲಿ ಅನ್ನುವುದೇ ಎಲ್ಲರ ಹಾರೈಕೆ.
Discussion about this post