ನಮ್ಮದೇ ರಾಜ್ಯದ ಮೂಡಿಗೆರೆಯಲ್ಲಿ 22 ವರ್ಷದ ಬಳಿಕ ತಾಯಿ ಮಗಳು ಒಂದಾದ ಸುದ್ದಿಯ ಬೆನ್ನಲ್ಲೇ ದೂರದ ಚೀನಾದಿಂದ 30 ವರ್ಷದ ಬಳಿಕ ಮಗನೊಬ್ಬ ತಾಯಿಯ ಮಡಿಲು ಸೇರಿದ ಸುದ್ದಿ ಬಂದಿದೆ.
ಹಾಗೇ ನೋಡಿದರ ಚೀನಾದಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿದೆ. ಕಾರಣ ಚೀನಾದಲ್ಲಿ ಗಂಡು ಮಕ್ಕಳ ಅಪಹರಣ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿರುತ್ತದೆ. ಗಂಡು ಸಂತಾನಕ್ಕಾಗಿ ಇಲ್ಲಿ ಮಂದಿ ಹಪ ಹಪಿಸುತ್ತಿರುತ್ತಾರೆ. ಹೀಗಾಗಿ ಗಂಡು ಮಕ್ಕಳನ್ನು ಅಪಹರಿಸುವ ದುಷ್ಕರ್ಮಿಗಳು ಬೇರೆ ಕುಟುಂಬಗಳಿಗೆ ಮಾರಾಟ ಮಾಡುತ್ತಾರೆ. ವರ್ಷಕ್ಕೆ ಎನಿಲ್ಲ ಅಂದರೂ ಇಲ್ಲಿ 20 ಸಾವಿರ ಮಕ್ಕಳ ಅಪಹರಣ ಪ್ರಕರಣ ದಾಖಲಾಗುತ್ತದೆ. ಹೀಗೆ ಅಪಹರಣಗೊಂಡವರು ಬೆಳೆದು ದೊಡ್ಡವರಾಗುತ್ತಿದ್ದಂತೆ ಅಸಲಿ ಕಥೆ ಗೊತ್ತಾಗುತ್ತದೆ. ಬಳಿಕ ತಮ್ಮ ಜೈವಿಕ ಪೋಷಕರ ಹುಡುಕಾಟಕ್ಕೆ ಮುಂದಾಗುತ್ತಾರೆ. ಇಂತವರಿಗೆ ಸಹಾಯ ಮಾಡಲೆಂದು ಸ್ವಯಂ ಸೇವಾ ಸಂಘಟನೆಗಳು ಕೂಡಾ ಅಲ್ಲಿದೆ.
ಹೀಗೆ 30 ವರ್ಷಗಳ ಹಿಂದೆ 4 ವರ್ಷದ ಲೀ ಜಿಂಗ್ವೈ ಎಂಬ ಮಗುವನ್ನು ಅಪಹರಿಸಲಾಗಿತ್ತು. ಬೇರೆ ಯಾರದ್ದೋ ಮನೆಯಲ್ಲಿ ಬೆಳೆದ ಲೀ ಜಿಂಗ್ವೈ ಗೆ ತನ್ನ ನಿಜವಾಗ ಪೋಷಕರು ಬೇರೆ ಅನ್ನುವುದು ಗೊತ್ತಾಗಿದೆ. ತಾನು ಹುಟ್ಟಿ ಬೆಳೆದ ಪ್ರದೇಶಕ್ಕೂ ಈಗಿರುವ ಪ್ರದೇಶಕ್ಕೂ ಹೋಲಿಕೆ ಇರಲಿಲ್ಲ. ಹೀಗಾಗಿ ತನ್ನ ಹಳೆಯ ನೆನಪುಗಳನ್ನು ಕೆದಕಿ ಹುಟ್ಟೂರಿನ ನಕ್ಷೆಯೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಜೊತೆಗೆ ಪೋಷಕರ ಪತ್ತೆಗೆ ಸಹಕರಿಸಿ ಅಂದಿದ್ದ.
ಈ ವೇಳೆ ಲೀ ಜಿಂಗ್ವೈ ತಾಯಿ ಪತ್ತೆಗೆ ಮುಂದಾದ ಸ್ವಯಂ ಸೇವಾ ಸಂಘಟನೆ ಸದಸ್ಯರು, ಪೊಲೀಸರ ಸಹಾಯದಿಂದ ಲೀ ಜಿಂಗ್ವೈ ತಾಯಿಯನ್ನು ಯುನ್ನನ್ ಪ್ರಾಂತ್ಯದಲ್ಲಿ ಪತ್ತೆ ಮಾಡಿದ್ದಾರೆ. DNA ಪರೀಕ್ಷೆಯ ಬಳಿಕ ಇವರೇ ನಿಜವಾದ ತಾಯಿ ಮಗ ಎಂದು ನಿರ್ಧಾರಕ್ಕೆ ಬಂದಿದ್ದಾರೆ.
ಇದೀಗ ತಾಯಿ ಹಾಗೂ ಮಗ 30 ವರ್ಷಗಳ ಬಳಿಕ ಜೊತೆ ಸೇರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : 22 ವರ್ಷದ ಬಳಿಕ ಒಂದಾದ ತಾಯಿ ಮಗಳು : ಚಿಕ್ಕಮಗಳೂರಿನಲ್ಲೊಂದು ಕರುಳು ಹಿಂಡೋ ಕಥೆ
Discussion about this post