ಗುಜರಾತಿನಲ್ಲಿ 70 ವರ್ಷದ ಮಹಿಳೆಯೊಬ್ಬರು ತಾಯಿಯಾಗುವ ಮೂಲಕ ಭಾರತದ ಮತ್ತೊಬ್ಬ ಹಿರಿಯ ತಾಯಿ ಅನ್ನುವ ಗೌರವಕ್ಕೆ ಪಾತ್ರವಾಗಿದ್ದಾರೆ.
ಗುಜರಾತಿನ ಕಚ್ ಪ್ರದೇಶದ ಮೋರಾ ಎಂಬ ಸಣ್ಣ ಹಳ್ಳಿಯ ಜೀವುಬೆನ್ ( 70 ) ಮತ್ತು ಪತಿ ಮಾಲ್ಧಾರಿ (75) 45 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಸಂತಾನ ಪಡೆಯುವ ಅವರ ಕನಸು ಮಾತ್ರ ನನಸಾಗಿರಲಿಲ್ಲ. ಸಂತಾನಕ್ಕಾಗಿ ಸುತ್ತದ ದೇವಸ್ಥಾನವಿಲ್ಲ, ಕಾಣದ ದೇವರಿಲ್ಲ. ಹೀಗಾಗಿ ಮಕ್ಕಳಿಲ್ಲ ಅನ್ನುವ ಕೊರಗಿನಲ್ಲೇ ಕೊನೆಯುಸಿರು ಎಳೆಯುತ್ತೇವೆಲ್ಲ ಅನ್ನುವ ಭಾವನೆಯೂ ಅವರನ್ನು ಆವರಿಸಿತ್ತು.
ಹಾಗಂತ ಪ್ರಯತ್ನ ನಿಲ್ಲಿಸಿರಲಿಲ್ಲ. ಈ ನಡುವೆ IVF ಮೂಲಕ ಮಗು ಪಡೆಯಬಹುದು ಅನ್ನುವ ಸಲಹೆಯನ್ನು ಅದ್ಯಾರೋ ಕೊಟ್ಟಿದ್ದಾರೆ. ಹೀಗಾಗಿ ಜೀವುಬೆನ್ ಮತ್ತು ಮಾಲ್ಧಾರಿ ದಂಪತಿ ಡಾ. ನರೇಶ್ ಭಾನುಶಾಲಿ ಅವರನ್ನು ಭೇಟಿಯಾಗಿದ್ದಾರೆ.
ಈ ವೇಲೆ ವೈದ್ಯರು ಐವಿಎಫ್ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಭಗವಂತನ ಮೇಲೆ ಸಂಪೂರ್ಣ ಭಾರ ಹಾಕಿದ ದಂಪತಿ ಮಗು ಪಡೆಯಲು ನಿರ್ಧರಿಸಿದ್ದಾರೆ. ಕೊನೆಗೂ ನಂಬಿದ ದೇವರು ನಿರಾಶೆ ಮಾಡದೆ ಮಡಿಲು ತುಂಬಿದ್ದಾನೆ. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಜೀವುಬೆನ್ ಅವರನ್ನು ಜಗತ್ತಿನ ಹಿರಿಯ ತಾಯಿ ಎಂದು ಕರೆಯಲಾಗುತ್ತಿದೆ. ಆದರೆ ಈಕೆ ಜಗತ್ತಿನ ಹಿರಿಯ ತಾಯಿಯಲ್ಲ. ಜಗತ್ತಿನ ಹಿರಿಯ ತಾಯಿ ಅನ್ನುವ ಗೌರವ ಆಂಧ್ರ ಪ್ರದೇಶದ ಗುಂಟೂರಿನ ಮಂಗಯಮ್ಮ ಅವರ ಹೆಸರಿನಲ್ಲಿದೆ. 2019ರಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ಗಂಡ ಎರ್ರಾಮಟಿ ರಾಜ ರಾವ್ ಅವರಿಗೆ ಆಗ 80 ವರ್ಷ ವಯಸ್ಸಾಗಿತ್ತು.
ಇದಕ್ಕೂ ಮುನ್ನ ರಾಜಸ್ತಾನದ ದಲ್ಜಿಂಧರ್ ಕೌರ್ ಅವರು ತಮ್ಮ 70ನೇ ವಯಸ್ಸಿನಲ್ಲಿ ತಾಯಿಯಾಗಿ ದಾಖಲೆ ಬರೆದಿದ್ದರು. ಅವರ ದಾಖಲೆಯನ್ನು ಮಂಗಯಮ್ಮ ಮುರಿದಿದ್ದರು.
Discussion about this post