ಗೋಕಾಕ್ : ಗೋಕಾಕ್ ಫಾಲ್ಸ್ ನಿಂದ 140 ಅಡಿ ಕೆಳಗೆ ಬಿದ್ದ ಯುವಕನೊಬ್ಬ ಬದುಕಿ ಬಂದ ಅಚ್ಚರಿಯ ಘಟನೆ ನಡೆದಿದೆ.
ಜೇವರ್ಗಿ ಮೂಲದ ಪ್ರದೀಪ್ ಸಾಗರ ಅನ್ನುವವರು ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಶನಿವಾರ ಗೆಳೆಯರ ಜೊತೆ ಘಟಪ್ರಭಾ ನದಿಯ ಗೋಕಾಕ ಜಲಪಾತ ವೀಕ್ಷಣೆಗೆ ಬಂದಿದ್ದಾರೆ. ಈ ವೇಳೆ ಜಲಪಾತದ ವೀವ್ ಪಾಯಿಂಟ್ ಬಳಿ ಕಾಲು ಜಾರಿ 140 ಅಡಿ ಆಳಕ್ಕೆ ಪ್ರದೀಪ್ ಬಿದ್ದಿದ್ದಾರೆ.
ತಕ್ಷಣ ಸ್ನೇಹಿತರು ಗೋಕಾಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಸಿದ್ದತೆ ಮಾಡಿಕೊಳ್ಳುವ ಹೊತ್ತಿಗೆ ಕತ್ತಲೆ ಆವರಿಸಿದೆ. ಹೀಗಾಗಿ ಭಾನುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿತ್ತು.
ಈ ನಡುವೆ ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಸ್ನೇಹಿತರ ಮೊಬೈಲ್ ಗೆ ಪ್ರದೀಪ್ ಮೊಬೈಲ್ ಕಡೆಯಿಂದ ಲೊಕೇಷನ್ ಶೇರ್ ಆಗಿದೆ. ಅಚ್ಚರಿಯಿಂದ ನೋಡಿದ್ರೆ ಅದು ಜಲಪಾತದ ಕೆಳ ಭಾಗ ತೋರಿಸುತ್ತಿತ್ತು. ತಕ್ಷಣ ಮತ್ತೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ, ಲೋಕೇಷನ್ ಆಧಾರದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಯೂಬ್ ಖಾನ್ ಸಹಕಾರದೊಂದಿಗೆ ರಕ್ಷಣೆ ಮಾಡಲಾಗಿದೆ.
ಕಾಲು ಜಾರಿ ಬಿದ್ದ ಪ್ರದೀಪ್, ನದಿಯ ನೀರಿನೊಂದಿಗೆ ಹರಿದು ಬಂದು ಪ್ರಪಾತದಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯ ಮೇಲೆ ಬಿದ್ದಿದ್ದಾರೆ. ಬಿದ್ದವರೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಮುಂಜಾನೆ ಎಚ್ಚರವಾದರೆ ಆಗಿರುವ ಅನಾಹುತದ ಅರಿವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಸಮಯ ಪ್ರಜ್ಞೆ ಮೆರೆದು ಲೋಕೇಷನ್ ಶೇರ್ ಮಾಡಿದ್ದಾರೆ.
Discussion about this post