ಸರ್ಕಾರದ ಪರವಾದವರಿಗೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಪಕ್ಕಾ
ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟಕ್ಕೆ ಭರ್ಜರಿ ಲಾಬಿ ಶುರುವಾಗಿದೆ. ಅದರಲ್ಲೂ ಸರ್ಕಾರದ ಪರವಾಗಿರುವವರ ಹೆಸರು ಮುನ್ನಲೆಗೆ ಬಂದಿದೆ.
ಸಾಹಿತ್ಯೇತರ ಸಾಧನೆಗಳನ್ನು ಪರಿಗಣಿಸಲು ಈ ಬಾರಿ ಒತ್ತಾಯ ಕೇಳಿ ಬಂದಿದ್ದು ಕನ್ನಡ ಪುಸ್ತಕ ಬರೆದ ಮಠಾಧೀಶರು, ಸಿನಿಮಾ ಸಾಹಿತಿಗಳು, ವಿಜ್ಞಾನಿಗಳು, ನ್ಯಾಯಾಧೀಶರ ಹೆಸರನ್ನು ಪರಿಗಣಿಸಬೇಕು ಅನ್ನುವ ಒತ್ತಾಯ ಜೋರಾಗಿದೆ. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಸರ್ವಾಧ್ಯಕ್ಷರು ಯಾರಾಗಬೇಕು ಅನ್ನೋದನ್ನ ತೀರ್ಮಾನಿಸುತ್ತಿತ್ತು. ಈ ಬಾರಿ ಅದರಲ್ಲಿ ವ್ಯತ್ಯಯವಾಗೋ ಲಕ್ಷಣಗಳಿವೆ.
ಸಾಣೇಹಳ್ಳಿ, ಬಾಲ್ಕಿ, ನಿಡುಮಾಮಿಡಿ ಸ್ವಾಮೀಜಿಗಳ ಹೆಸರಿನ ಜೊತೆಗೆ ವಿಜ್ಞಾನಿ ಸಿಎನ್ಆರ್ ರಾವ್ ಅವರ ಹೆಸರು ಮುನ್ನಲೆಗೆ ಬಂದಿದೆ. ಜೊತೆಗೆ ನ್ಯಾ.ನಾಗಮೋಹನ್ ದಾಸ್, ನ್ಯಾ. ಶಿವರಾಜ್ ಪಾಟೀಲ್, ಹೆಸರು ಪರಿಗಣಿಸಲು ಒಂದು ವರ್ಗ ಒತ್ತಾಯಿಸಿದ್ರೆ, ಚಿತ್ರ ಸಾಹಿತಿ ಹಂಸಲೇಖ ಅವರ ಪರವಾಗಿ ಚಿತ್ರರಂಗ ನಿಂತಿದೆ.
ಮತ್ತೊಂದು ಕಡೆ ಈವರೆಗೆ ಅಂದ್ರೆ 87 ಸಾಹಿತ್ಯ ಸಮ್ಮೇಳನಗಳಲ್ಲಿ 4 ಬಾರಿ ಮಾತ್ರ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಈ ಬಾರಿ ಮಹಿಳಾ ಸಾಹಿತಿಯೊಬ್ಬರಿಗೆ ಅವಕಾಶ ನೀಡಿ ಅನ್ನೋ ವಾದವು ಕೇಳಿಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳಲ್ಲದವರು ಕೂಡಾ ವಿವಿಧ ಅಕಾಡೆಮಿಗಳಿಗೆ ನೇಮಕವಾಗುತ್ತಿದ್ದಾರೆ, ಹೀಗಾಗಿ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳಲ್ಲದವರು ನೇಮಕವಾದರೆ ತಪ್ಪೇನು ಅನ್ನೋ ವಾದವೂ ಇದೆ.
ಅಂದ ಹಾಗೇ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದೆ. ಕನ್ನಡ ಅಭಿವೃದ್ಧಿಗೆ ಕೆಲಸ ಮಾಡಿರೋ ಸಾಧಕರ ಹೆಸರನ್ನು ಪರಿಗಣಿಸಲು ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ಕಾರ್ಯಕಾರಿ ಸಮಿತಿಯಲ್ಲಿ ಯಾವ ನಿರ್ಧಾರ ಹೊರ ಬೀಳಲಿದೆ ಅನ್ನೋದು ಈ ಬಾರಿಯ ಕುತೂಹಲ.