ಚಂದಾ ಹೆಸರಲ್ಲಿ ಕಿರುಕುಳ ಕೊಟ್ರೆ 112ಗೆ ಕರೆ ಮಾಡಿ
ಸಡಗರ ಸಂಭ್ರಂದಿಂದ ಆಚರಿಸುವ ಗಣೇಶೋತ್ಸವಕ್ಕೆ ಎಂದಿನಂತೆ ಪೊಲೀಸ್ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ನಮ್ಮ ದೇವರನ್ನು ಆರಾಧಿಸಲು ಪ್ರತೀ ವರ್ಷ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಅದೇ ರೀತಿ ಈ ಬಾರಿಯೂ ಗಣೇಶಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಹಲವು ನಿಯಮಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಈ ನಡುವೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ, ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಈ ರೀತಿ ಚಂದಾ ವಿಚಾರದಲ್ಲಿ ಕಿರುಕುಳ ಎದುರಿಸಿದ್ರೆ 112 ಸಂಖ್ಯೆ ಕರೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಇನ್ನು ಗಣೇಶ ಹಬ್ಬದ ಹಿನ್ನಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಶಾಂತಿ ಸಭೆಗಳನ್ನು ನಡೆಸಿದೆ. ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಸಲುವಾಗಿ ಬಿಬಿಎಂಪಿ 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆದಿದ್ದು, ಪ್ರತೀ ಕೇಂದ್ರಕ್ಕೆ ಪೊಲೀಸ್ ಅಧಿಕಾರಿಯನ್ನೇ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.