ಭಾರತದ ರಾಷ್ಟ್ರೀಯ ಕ್ರೀಡೆ ಎಂದೆನಿಸಿಕೊಂಡಿದ್ದ ಹಾಕಿಯಲ್ಲಿ ಭಾರತ ತಂಡದ ಸಾಧನೆ ತೀರಾ ಕಳಪೆ ಅನ್ನುವ ನೋವು ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಕಾರಣಗಳು ನೂರಾರು. ಅದರಲ್ಲೂ ಒಲಿಂಪಿಕ್ಸ್ ನಲ್ಲಿ ಹಾಕಿ ತಂಡ ಪದಕ ಗೆಲ್ಲುವುದೇ ಅಪರೂಪವಾಗಿತ್ತು. ಆದರೆ ಕಳೆದ ಹಲವು ವರ್ಷದಿಂದ ಹಾಕಿ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಸಲುವಾಗಿ ಇನ್ನಿಲ್ಲದಂತೆ ತರಬೇತಿ ನೀಡಲಾಗಿದೆ.
ಅದರ ಫಲ ಅನ್ನುವಂತೆ ನಿನ್ನೆ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಈ ಮೂಲಕ ಪದಕ ಗೆಲ್ಲಲು ಇನ್ನು ಒಂದು ಹೆಜ್ಜೆ ಬಾಕಿ ಇರಿಸಿಕೊಂಡಿದೆ. ಆದರೆ ಮೊನ್ನೆ ಮೊನ್ನೆ ನಿರಾಸೆ ಮೂಡಿಸಿದ್ದ ಮಹಿಳೆಯರ ಹಾಕಿ ತಂಡ ಅದೃಷ್ಟ ಅನ್ನುವಂತೆ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇದೀಗ ಅದೃಷ್ಟದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಮಹಿಳಾ ಆಟಗಾರರು ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.
ಇನ್ನು ಭಾರತ ಮಹಿಳಾ ಹಾಕಿ ತಂಡ ಮೂರನೇ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಎದುರಾಳಿ ಆಸ್ಟ್ರೇಲಿಯಾವನ್ನು 1-0 ಗೋಲುಗಳಲ್ಲಿ ಮಣಿಸುವ ಮೂಲಕ ಅಭೂತಪೂರ್ವ ಜಯ ಸಾಧಿಸಿದ್ದಾರೆ.
ಟೋಕಿಯೊ ಒಲಂಪಿಕ್ಸ್ ನಲ್ಲಿ ಅದೃಷ್ಟ ಭಾರತ ಮಹಿಳಾ ಹಾಕಿ ತಂಡದ ಕೈಹಿಡಿದಿದೆ ಅಂದ್ರೆ ತಪ್ಪಲ್ಲ, ಗ್ರೇಟ್ ಬ್ರಿಟನ್ ಹಾಗೂ ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಸೋತ ಕಾರಣ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
Discussion about this post