ಕರುವನ್ನು ಕೊಂದ ಬಸ್ ಬಣ್ಣ ಬದಲಾದರೂ ಇಂದಿಗೂ ಅದೇ ಬಸ್ ಅನ್ನು ಅಟ್ಟಿಸಿಕೊಂಡು ಹೋಗುವ ಹಸುವನ್ನು ನೋಡಿದ್ದೇವೆ. ಮನೆ ಮಾಲೀಕ ಮೃತಪಟ್ಟ ವೇಳೆ ಕಣ್ಣೀರು ಹಾಕೋ ನಾಯಿಯನ್ನು ನೋಡಿದ್ದೇವೆ. ಮೇಲೆ ಕೂತವ ಅಪಾಯಕ್ಕೆ ಸಿಲುಕುತ್ತಾನೆ ಅನ್ನೋದು ಅರಿವಾದ ತಕ್ಷಣ ಜಾಗೃತವಾಗುವ ಕುದುರೆಯನ್ನು ನೋಡಿದ್ದೇವೆ. ಹೀಗೆ ಮನುಷ್ಯರಿಗೆ ಹೋಲಿಸಿದರೆ ಪ್ರಾಣಿಗಳು ಎಷ್ಟೋ ಉತ್ತಮ ಅನ್ನುವ ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಲೆ ಇರುತ್ತದೆ.
ಕೇರಳದಲ್ಲೂ ಇಂತಹುದೇ ಘಟನೆಯೊಂದು ನಡೆದಿದ್ದು, ತನ್ನ ನೆಚ್ಚಿನ ಮಾವುತ ಮೃತಪಟ್ಟ ಬೆನ್ನಲ್ಲೇ ಆತನ ಅಂತಿಮ ದರ್ಶನಕ್ಕಾಗಿ ಆನೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂಕುಶ ಹಿಡಿದ ಮಾವುತ ನೋವು ಕೊಟ್ಟಿದ್ದರೂ, ಹಸಿವಾದ ವೇಳೆ ಅನ್ನ ಕೊಟ್ಟಿದ್ದ, ಅವನು ತಿನ್ನುತ್ತಿದ್ದ ಆಹಾರದಲ್ಲಿ ಒಂದಿಷ್ಟು ಪಾಲು ನೀಡುತ್ತಿದ್ದ. ದೇವಸ್ಥಾನದ ಜಾತ್ರೆ ಅಂದಾಗ ಸಿಂಗರಿಸುತ್ತಿದ್ದ, ತಾನೇ ಮೈ ಮೇಲೆ ಮೆತ್ತಿಕೊಂಡ ಕೆಸರನ್ನು ಒಂದು ದಿನವೂ ಕೋಪ ಮಾಡದೆ ಮಾವುತ ಸ್ವಚ್ಛಗೊಳಿಸಿದ್ದಾನೆ ಅನ್ನೋ ಪ್ರೀತಿಯಿಂದ ಬಂದ ಆನೆ ತನ್ನ ಅಂತಿಮ ನಮನವನ್ನು ಸಲ್ಲಿಸಿ ಭಾರವಾದ ಹೆಜ್ಜೆಗಳೊಂದಿಗೆ ಹಿಂತಿರುಗಿದೆ.
ಅಂದ ಹಾಗೇ ಮನ ತಟ್ಟೋ ಈ ಘಟನೆ ನಡೆದಿರುವುದು ಕೇರಳದ ಕೊಟ್ಟಾಯಂನಲ್ಲಿ.
ಕುನ್ನಕಾಡ್ ದಾಮೋದರ್ ನಾಯರ್ ಅಲಿಯಾಸ್ ಒಮನ್ ಚೆಟ್ಟನ್ ಕಳೆದ 6 ದಶಕಗಳ ಕಾಲ ಆನೆಗಳೊಂ ದಿಗೆ ಬೆಳೆದಿದ್ದರು. ಸಣ್ಣ ವಯಸ್ಸಿನಲ್ಲೇ ಆನೆಗಳೊಂದಿಗೆ ಓಡನಾಟ ಇಟ್ಟುಕೊಂಡಿದ್ದ ದಾಮೋದರ್ ನಾಯರ್ ಮಾವುತನಾಗಿಯೂ ಕೆಲಸ ಮಾಡಿದ್ದರು. ಆದರೆ ಆರೋಗ್ಯ ಕೈ ಕೊಟ್ಟ ಕಾರಣ ಕೆಲ ವರ್ಷಗಳ ಹಿಂದೆ ಮಾವುತ ವೃತ್ತಿಯಿಂದ ನಿವೃತ್ತಿ ಪಡೆದಿದ್ದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಇವರು ಜೂನ್ 3 ರಂದು 74ನೇ ವಯಸ್ಸಿನಲ್ಲಿ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದರು.
ದಾಮೋದರ್ ನಾಯರ್ ಇನ್ನಿಲ್ಲ ಅನ್ನುವ ಸುದ್ದಿ ಕೇಳಿದ ಆನೆಯ ಮಾಲೀಕ ಆನೆಯೊಂದಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಪಾರ್ಥಿವ ಶರೀರ ಕಂಡು ಸೊಂಡಿಲೆತ್ತಿ ನಮನ ಸಲ್ಲಿಸಿದ ರೀತಿ ಕಣ್ಣಲ್ಲಿ ನೀರು ತರಿಸುವಂತಿದೆ. ಬಳಿಕ ಮನೆಯ ಸದಸ್ಯರೊಬ್ಬರು ಆನೆಯನ್ನು ಸಂತೈಸಿದ ಬಳಿಕ ಅದು ಹಿಂತಿರುಗಿದೆ.
ಅಂದ ಹಾಗೇ ಪಲ್ಲತ್ ಬ್ರಹ್ಮದಾದನ್ ಹೆಸರಿನ ಈ ಆನೆಯ ಮಾವುತರಾಗಿಯೂ ನಾಯರ್ ಕೆಲಸ ನಿರ್ವಹಿಸಿದ್ದರಂತೆ. ಜೊತೆಗೆ ಅವರ ಕುಟುಂಬ ಸದಸ್ಯರೂ ಕೂಡಾ ಆನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
Discussion about this post