ಬೆಂಗಳೂರು : ಕೊರೋನಾ ಲಸಿಕೆ ಪಡೆದರೂ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ಬರಲಿಲ್ವ, ಕುಮಾರಸ್ವಾಮಿ ಲಸಿಕೆ ಪಡೆದರೂ ಎನಾಯ್ತು, ಚಾಮರಾಜನಗರ ಜಿಲ್ಲಾಧಿಕಾರಿಗಳು ಎರಡು ಡೋಸ್ ಲಸಿಕೆ ಪಡೆದರೂ ಎರಡನೇ ಸಲ ಸೋಂಕು ಬಂದಿಲ್ವ ಅನ್ನುವ ಪ್ರಶ್ನೆಗಳು ಇತ್ತೀಚೆಗೆ ಜಾಸ್ತಿಯಾಗಿದೆ. ಇದು ಕರ್ನಾಟಕದ ಮಟ್ಟಿಗಿನ ಪ್ರಶ್ನೆಗಳ ಸ್ಯಾಂಪಲ್, ರಾಷ್ಟ್ರ ಮಟ್ಟದಲ್ಲಿ ಈ ಪ್ರಶ್ನೆಗಳು ಹೇಗಿರಬಹುದು ಊಹಿಸಿ.
ಆದರೆ ಮೊದಲ ಡೋಸ್ ಪಡೆದ ಅದೆಷ್ಟು ಮಂದಿಗೆ ಸೋಂಕು ಬಂದಿದೆ, ಎರಡನೇ ಡೋಸ್ ಪಡೆದು 45 ದಿನ ಕಳೆದ ಅದೆಷ್ಟು ಮಂದಿಗೆ ಸೋಂಕು ಬಂದಿದೆ ಅನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಜನರ ಈ ಎಲ್ಲಾ ಪ್ರಶ್ನೆಗಳಿಗೆ ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ಉತ್ತರಿಸಿದ್ದು, ಈಗಾಗಲೇ ದೇಶದಲ್ಲಿ ಒಟ್ಟು 13 ಕೋಟಿ ಮಂದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಈ ಪೈಕಿ ಕೇವಲ 26500 ಮಂದಿಗೆ ಸೋಂಕು ಬಂದಿದೆ ಅಂದಿದ್ದಾರೆ. ಇನ್ನು ಲಸಿಕೆ ಪಡೆದು ಸೋಂಕು ಬಂದ ಯಾರ ಆರೋಗ್ಯದಲ್ಲೂ ತೀವ್ರ ಏರುಪೇರು ಸಂಭವಿಸಿಲ್ಲ, ಯಾರೂ ಕೂಡಾ ಕ್ರಿಟಿಕಲ್ ಅನ್ನಿಸಿಕೊಂಡಿಲ್ಲ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡವರ ಪೈಕಿ 21 ಸಾವಿರ ಜನರಿಗೆ ಸೋಂಕು ತಗುಲಿದೆ. ಇನ್ನು ಎರಡನೇ ಡೋಸ್ ಪಡೆದವರ ಪೈಕಿ 5,709 ಮಂದಿಗೆ ಸೋಂಕು ತಗುಲಿದೆ. ಅಲ್ಲಿಗೆ ದೇಶದಲ್ಲಿ ಪ್ರಾರಂಭವಾಗಿರುವ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ನಿಯಂತ್ರಿಸುವಲ್ಲಿ ಈ ಎರಡೂ ಲಸಿಕೆಗಳು ಪ್ರಮುಖ ಪಾತ್ರ ವಹಿಸಿದೆ ಅನ್ನುವುದು ಸ್ಪಷ್ಟ. ಇನ್ನು ಕೊರೋನಾ ವಾರಿಯರ್ಸ್, ಆರೋಗ್ಯ ಕಾರ್ಯಕರ್ತರು ಶೇ100ರಷ್ಟು ಲಸಿಕೆ ಹಾಕಿಸಿಕೊಂಡಿಲ್ಲ. ಒಂದು ವೇಳೆ ಅವರೆಲ್ಲರೂ ಲಸಿಕೆ ಹಾಕಿಸಿಕೊಂಡಿದ್ರೆ ಕೊರೋನಾ ಸೋಂಕಿನ ಎರಡನೆ ಅಲೆಯಲ್ಲಿನ ಈ ಪ್ರಮಾಣ ಇನ್ನೂ ಕಡಿಮೆಯಾಗುತ್ತಿತ್ತು.
ದೇಶದಲ್ಲಿ ಈವರೆಗೆ 1.1 ಕೋಟಿ ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಪೈಕಿ 93 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದು, ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ 4208 ಜನರಿಗೆ ಸೋಂಕು ಬಂದಿದೆ. ಕೋವ್ಯಾಕ್ಸಿನ್ ನ ಎರಡನೇ ಡೋಸ್ ಪಡೆದ 17,37,178 ಜನರ ಪೈಕಿ ಕೇವಲ 695 ಜನರಿಗೆ ಸೋಂಕು ಬಂದಿದೆ.
ಇನ್ನು 11.6 ಕೋಟಿ ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಈ ಪೈಕಿ 10 ಕೋಟಿ ಮಂದಿ ಮೊದಲ ಡೋಸ್ ಪಡೆದಿದ್ದು 17 145 ಮಂದಿಗೆ ಸೋಂಕು ಬಂದಿದೆ. ಇದೇ ಲಸಿಕೆಯ 2ನೇ ಡೋಸ್ ಅನ್ನು 1.57 ಕೋಟಿ ಜನ ಹಾಕಿಸಿಕೊಂಡಿದ್ದು 5014 ಮಂದಿಗೆ ಸೋಂಕು ತಗುಲಿದೆ.
ಅಲ್ಲಿಗೆ ಭಾರತದ ಎರಡೂ ಲಸಿಕೆಗಳು ಉತ್ತಮ ಸಾಧನೆಯನ್ನು ಮಾಡಿದೆ ಅನ್ನುವುದು ಸ್ಪಷ್ಟ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯ ಪ್ರಾರಂಭವಾಗುತ್ತಿದೆ. ಹೀಗಾಗಿ ಸರ್ವರೂ ಲಸಿಕೆ ಹಾಕಿಸಿಕೊಂಡರೆ ಮೂರನೇ ಅಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರದು ಅನ್ನಲಾಗಿದೆ.
Discussion about this post