ಕೇರಳ : ಹಣೆ ಬರಹ ಗಟ್ಟಿ ಇದ್ದವನು ಹುಲು ಕಡ್ಡಿ ಸಿಕ್ಕಿದ್ರೆ ಸಾಕು ಬದುಕಿ ಬರುತ್ತಾನೆ ಅನ್ನುವ ಮಾತು ಸುಳ್ಳಲ್ಲ.
ಆಯುಷ್ಯ ಗಟ್ಟಿ ಇದ್ರೆ ಅದ್ಯಾವ ಆಪತ್ತು ಇರಲಿ ಗೆದ್ದು ಬರಲು ಖಂಡಿತಾ ಸಾಧ್ಯವಿದೆ.
ಇದಕ್ಕೊಂದು ಸಾಕ್ಷಿ ಅನ್ನುವಂತಹ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೋಯಿಕೋಡ್ ನ ವಡಕರದಲ್ಲಿ ನಡೆದ ಘಟನೆ ಇದೀಗ ವೈರಲ್ ಆಗಿದೆ.
ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡಿದವರ ಮೈಜುಮ್ಮೆನಿಸುವುದರಲ್ಲಿ ಸಂಶಯವಿಲ್ಲ. ಅದ್ಯಾವುದೋ ಹಾಲಿವುಡ್ ಸಿನಿಮಾ ನೋಡಿ ಬಂದ ಅನುಭವವಾಗುತ್ತದೆ.
ಇಬ್ಬರು ವ್ಯಕ್ತಿಗಳು ಕಟ್ಟಡವೊಂದರ ಮೊದಲ ಮಹಡಿಯಲ್ಲಿ ತಡೆಗೋಡೆಗೆ ಒರಗಿ ನಿಂತಿದ್ದಾರೆ.
ಅದರಲ್ಲಿ ಒಬ್ಬ ಕೆಂಪು ಶರ್ಟ್, ಬಿಳಿ ವೇಸ್ಟಿ ಧರಿಸಿದ್ದ, ಮತ್ತೊಬ್ಬ ವ್ಯಕ್ತಿ ನೀಲಿ ಶರ್ಟ್ ಹಾಗೂ ಕೇಸರಿ ಮುಂಡು ಧರಿಸಿದ್ದ.
ಕೆಲವೇ ಕ್ಷಣಗಳಲ್ಲಿ ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿ ತಲೆ ಸುತ್ತು ಬಂದವರಂತಾಗಿ ಉಲ್ಟಾ ಬೀಳಲಾರಂಭಿಸಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ನೀಲಿ ಶರ್ಟ್ ಧರಿಸಿದ್ದ ವ್ಯಕ್ತಿ ರಕ್ಷಣೆ ದೌಡಾಯಿಸಿದ್ದಾರೆ. ಈ ವೇಳೆ ಅವರಿಗೆ ಸಿಕ್ಕಿದ್ದು ಕೆಂಪು ಶರ್ಟ್ ಧರಿಸಿದ ವ್ಯಕ್ತಿಯ ಪಾದ ಮಾತ್ರ,
ಆದರೂ ಭಾರವನ್ನು ತಡೆದುಕೊಂಡವರೇ ಅಕ್ಕ ಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾರೆ. ತಕ್ಷಣ ದೌಡಾಯಿಸಿ ಬಂದ ಮಂದಿ ಇನ್ನೇನು ನೆಲಕ್ಕೆ ಅಪ್ಪಳಿಸಬೇಕಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಅಂದ ಹಾಗೇ ರಕ್ಷಿಸಿದ ವ್ಯಕ್ತಿಯನ್ನು ಬಾಬು ಎಂದು ಗುರುತಿಸಲಾಗಿದೆ. ರಕ್ಷಣೆ ಮಾಡಿದವರನ್ನು ಥೈಲ್ ಮಿತ್ತಲ್ ಬಾಬು ರಾಜ್ ಎಂದು ಗುರುತಿಸಲಾಗಿದೆ.
ಮಡಕರದ ಕೇರಳ ಬ್ಯಾಂಕ್ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಬಾಬು ಹಾಗೂ ಬಾಬುರಾಜ್ ತಮ್ಮ ಪಿಎಫ್ ಹಣ ಕಟ್ಟಲು ಬ್ಯಾಂಕ್ ಗೆ ಬಂದಿದ್ದರು ಎಂದು ಗೊತ್ತಾಗಿದೆ.
Discussion about this post