ಬೆಂಗಳೂರು : ಕೊರೋನಾ ಸೋಂಕಿನ ಪ್ರಮಾಣ ತಗ್ಗಿದ ಬೆನ್ನಲ್ಲೇ ಶಾಲಾ ಕಾಲೇಜು ಪ್ರಾರಂಭಿಸುವ ಕುರಿತಂತೆ ಚಿಂತನೆಗಳು ಪ್ರಾರಂಭವಾಗಿದೆ. ಆದರೆ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದು ಜುಲೈ 26 ರಿಂದ ತರಗತಿಗಳನ್ನು ಪ್ರಾರಂಭಿಸಲಿದೆ. ಆಗಸ್ಟ್ ಮೊದಲ ವಾರದಲ್ಲಿ 10 ಹಾಗೂ 12 ನೇ ತರಗತಿ ಪ್ರಾರಂಭವಾಗುವ ಸಾಧ್ಯತೆಗಳಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಅಗಸ್ಟ್ ಅಂತ್ಯಕ್ಕೆ ಪ್ರಾಥಮಿಕ ಶಾಲೆಗಳು ಬಾಗಿಲು ತೆರೆಯಲಿದೆ.
ಈ ನಡುವೆ ಕಳೆದ ಮಾರ್ಚ್ ನಿಂದ ಜೂನ್ ನಡುವಿನ 4 ತಿಂಗಳಲ್ಲಿ 1.88 ಲಕ್ಷ ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಗ್ಯ ಇಲಾಖೆ ವರದಿಯೊಂದನ್ನು ಅಂಕಿ ಅಂಶದೊಂದಿಗೆ ಪ್ರಕಟಿಸಿದ್ದು, ರಾಜ್ಯದಲ್ಲಿ ಈವರೆಗೆ ಸೋಂಕಿಗೆ 1,212 ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕ ಬಲರಾಮ್ ಭಾರ್ಗವ ಸೂಚನೆ ನೀಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಈ ಅಂಕಿ ಅಂಶ ಪ್ರಕಟಿಸಿದೆ. ಆಗಸ್ಟ್ನಿಂದ ಕೋವಿಡ್ ಮೂರನೇ ಅಲೆ ಹರಡುವ ಸಾಧ್ಯತೆಗಳಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಇನ್ನು ಮೊದಲ ಅಲೆಯಲ್ಲಿ ಒಟ್ಟು ಸೋಂಕಿತರಲ್ಲಿ ಶೇ 8ರಷ್ಟು ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಆದರೆ, ಎರಡನೇ ಅಲೆಯಲ್ಲಿ ಶೇ10ರಷ್ಟು ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಎರಡನೇ ಅಲೆ ಹೊತ್ತಿಗೆ ಸೋಂಕಿತ ಮಕ್ಕಳ ಪ್ರಮಾಣ ಶೇ 2ರಷ್ಟು ಹೆಚ್ಚಾಗಿತ್ತು.
Discussion about this post