ಬೆಂಗಳೂರು : ವಿಶ್ವದಲ್ಲಿ ಕೊರೋನಾ ವೈರಸ್ ಹೊಸ ರೂಪಾಂತರಿ ಒಮಿಕ್ರೋನ್ ಭೀತಿ ಹೆಚ್ಚಾಗತೊಡಗಿದೆ. ಈಗಾಗಲೇ ಕರ್ನಾಟಕದಲ್ಲಿ ಒಮಿಕ್ರೋನ್ ಸೋಂಕು ಪತ್ತೆಯಾಗಿದ್ದು, ಭಾರತದಲ್ಲಿ ಮೂರನೇ ಅಲೆ ಪ್ರಾರಂಭವಾಗೋದು ಖಚಿತ ಎನ್ನಲಾಗಿದೆ.
ಈ ನಡುವೆ ಹೊಸ ರೂಪಾಂತರಿ ವೈರಸ್ ಒಮಿಕ್ರೋನ್ ಕಾಣಿಸಿಕೊಂಡಿರುವ ದಕ್ಷಿಣ ಆಫ್ರಿಕಾದಲ್ಲಿ ನಾಲ್ಕನೇ ಅಲೆ ಕಾಣಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ 4ನೇ ಅಲೆ ಕಾಣಿಸಿಕೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅದು ಅಲ್ಲಿದ ಕಥೆಯಾದರೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ 10 ಮಂದಿ ತಲೆ ಮರೆಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಒಟ್ಟು 57 ಮಂದಿ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದು, ಎಲ್ಲರನ್ನೂ RT-PCR ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ನೆಗೆಟಿವ್ ಬಂದಿತ್ತು. ಹಾಗಿದ್ದರೂ ಸರ್ಕಾರದ ನಿಯಮಗಳ ಪ್ರಕಾರ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಹೇಳಲಾಗಿತ್ತು. ಆದರೆ ಈ ಪೈಕಿ 10 ಮಂದಿ ನಾಪತ್ತೆಯಾಗಿದ್ದಾರೆ. ಅವರೆಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದ್ದಾರೆ.
ಹೀಗಾಗಿ ತಲೆಮರೆಸಿಕೊಂಡವರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಮುಂದೆ ಹೀಗೆ ತಲೆಮರೆಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
Discussion about this post