ರೇಣುಕಾಸ್ವಾಮಿಯ ಹತ್ಯೆ ಅಮಾನವೀಯ ಕೃತ್ಯ, ದೇಶಾದ್ಯಂತ ಈ ಘಟನೆಗೆ ಖಂಡನೆ
ಬೆಂಗಳೂರಿನಲ್ಲಿ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಪಕ್ಷದ ವತಿಯಿಂದ ಪರಿಹಾರ ವಿತರಿಸಿದರು.
ಈ ವೇಳೆ ಸಂಸದ ಗೋವಿಂದ ಕಾರಜೋಳ, ಶಾಸಕ ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ತಿಪ್ಪಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಬಿ.ವೈ ವಿಜಯೇಂದ್ರ, ರೇಣುಕಾಸ್ವಾಮಿಯ ಹತ್ಯೆ ಅಮಾನವೀಯ ಕೃತ್ಯವಾಗಿದ್ದು, ದೇಶಾದ್ಯಂತ ಈ ಘಟನೆಗೆ ಖಂಡನೆ ವ್ಯಕ್ತವಾಗುತ್ತಿದೆ. ತಪ್ಪಿತಸ್ಥರಿಗೆ ಕಾನೂನು ರೀತಿ ಕ್ರಮ ಆಗಬೇಕು. ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಜೊತೆಗೆ ಸರ್ಕಾರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.
ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ಅತ್ಯುಗ್ರವಾಗಿ ಖಂಡಿಸುವ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣ ಮಾಹಿತಿ ಹಾಗೂ ಪರಸ್ಪರ ಸ್ನೇಹ ಬೆಸೆಯುವ ತಾಣವಾಗಬೇಕು ಆದರೆ ದ್ವೇಷ, ಕೊಲೆ, ವಿಕೃತ ಹರಡುವ ಮಟ್ಟಕ್ಕೆ ವಿಸ್ತಾರಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಕರಣದ ತನಿಖೆ ನ್ಯಾಯಯುತವಾದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ನಂಬಿದ್ದೇನೆ, ಆರೋಪ ಪಟ್ಟಿ ಸಲ್ಲಿಸುವವರೆಗೂ ಯಾವ ಹಸ್ತಕ್ಷೇಪಕ್ಕೂ ಪೊಲೀಸರು ಮಣಿಯಬಾರದು, ರೇಣುಕಾ ಸ್ವಾಮಿ ಕೊಲೆಗೆ ನ್ಯಾಯ ಸಿಗಲೇಬೇಕು, ತಪ್ಪಿತಸ್ಥರು ಎಷ್ಟೇ ದೊಡ್ಡವರಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕಾಗಿದೆ ಅಂದರು
Discussion about this post