Zee News Anchor Rohit Ranjanನನ್ನು ಬಂಧಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಪೊಲೀಸರು ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಬಿಜೆಪಿ ಆಡಳಿತವಿರುವ ರಾಜ್ಯದ ಪೊಲೀಸರು ಬಂಧಿಸಿದ್ದಾರೆ
ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳ ಪ್ರಕರಣ ಸಂಬಂಧ ನೀಡಿದ್ದ ಹೇಳಿಕೆಯನ್ನು ಉದಯಪುರ ಹತ್ಯೆ ಘಟನೆಗೆ ಬಳಸಿ ವಿಡಿಯೋ ಪ್ರಸಾರ ಮಾಡಿದ್ದ ಝೀ ನ್ಯೂಸ್ ಸುದ್ದಿ ವಾಚಕ ರೋಹಿತ್ ರಂಜನ್ ( Zee News Anchor Rohit Ranjan) ಬಂಧನಕ್ಕೆ ಎರಡು ರಾಜ್ಯಗಳ ಪೊಲೀಸರು ಕಿತ್ತಾಡಿಕೊಂಡ ಘಟನೆ ನಡೆದಿದೆ.
ಇದೇ ವಿವಾದ ಸಂಬಂಧ ಛತ್ತೀಸ್ಗಢ ಹಾಗೂ ರಾಜಸ್ಥಾನದಲ್ಲಿ ಪ್ರಕರಣ ದಾಖಲಾಗಿತ್ತು. ಉತ್ತರ ಪ್ರದೇಶ ಪೊಲೀಸರ ಪ್ರಕಾರ ಯುಪಿಯಲ್ಲೂ ರೋಹಿತ್ ರಂಜನ್ ( Zee News Anchor Rohit Ranjan ) ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಡುವೆ ರಾಹುಲ್ ಬಂಧನಕ್ಕೆ ಛತ್ತೀಸ್ಗಢದಿಂದ ಆಗಮಿಸಿದ ಪೊಲೀಸರು ನೋಯ್ಡಾದಲ್ಲಿರುವ ರೋಹಿತ್ ಮನೆಯನ್ನು ಸುತ್ತುವರಿದಿದ್ದರು. ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು , ಛತ್ತೀಸ್ಗಢ ಪೊಲೀಸರ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಕೂಡಾ ಆಗಮಿಸಿದ್ದಾರೆ. ಎರಡು ರಾಜ್ಯದ ಪೊಲೀಸರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ನಮ್ಮ ಅನುಮತಿ ಪಡೆಯದೆ ಹೇಗೆ ಬಂದ್ರಿ ಅನ್ನುವುದು ಯುಪಿ ಪೊಲೀಸರ ಪ್ರಶ್ನೆ. ನಮಗೆ ಬೇಕಾದ ಆರೋಪಿಯನ್ನು ನೀವು ಹೇಗೆ ಬಂಧಿಸುತ್ತೀರಿ ಎಂದು ಛತ್ತೀಸ್ಗಢ ಪೊಲೀಸರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ
ಇದನ್ನೂ ಓದಿ : Gadag probationary psi : ಪಾರ್ಸೆಲ್ ವಿಚಾರಕ್ಕೆ ಡಾಬಾ ಪುಡಿ ಮಾಡಿದ ಪ್ರೊಬೆಷನರಿ ಪಿಎಸ್ಐ : ಗದಗದಲ್ಲೊಂದು ಅಮಾನವೀಯ ಘಟನೆ
ಕೊನೆಗೆ ಝೀ ನ್ಯೂಸ್ ಸುದ್ದಿ ವಾಚಕ ರೋಹಿತ್ ರಂಜನ್ ನನ್ನು ವಶಕ್ಕೆ ಪಡೆಯುವಲ್ಲಿ ಉತ್ತರ ಪೊಲೀಸರು ಯಶಸ್ವಿಯಾಗಿದ್ದು, ಮೃದು ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.
ಏನಿದು ಪ್ರಕರಣ…!
ಇತ್ತೀಚೆಗೆ ರಾಹುಲ್ ಗಾಂಧಿ ತಮ್ಮ ಸ್ವ ಕ್ಷೇತ್ರ ವಯನಾಡಿಗೆ ತೆರಳಿದ್ದರು. ಕೆಲ ದಿನಗಳ ಹಿಂದೆ ಎಸ್ಎಫ್ಐ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಕಚೇರಿಯನ್ನು ಧ್ವಂಸ ಮಾಡಿದ್ದರು. ಈ ಘಟನೆಯ ಬಗ್ಗೆ ಅಂದು ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ಈ ಘಟನೆಯನ್ನು ಮಾಡಿದವರು ಮಕ್ಕಳು ಅಂದಿದ್ದರು. ಝೀ ನ್ಯೂಸ್ ಚಾನೆಲ್, ಇದು ರಾಹುಲ್ ಗಾಂಧಿ ಉದಯಪುರ ಘಟನೆಯ ಕುರಿತಾಗಿ ಹೇಳಿದ್ದ ಮಾತು ಎಂದು ಪರಿಗಣಿಸಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಛತ್ತೀಸ್ಗಢ ಹಾಗೂ ರಾಜಸ್ಥಾನದಲ್ಲಿ ನಿರೂಪಕ ರೋಹಿತ್ ರಂಜನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಅಂದರೆ ಜುಲೈ 2 ರಂದು, ಪತ್ರಕರ್ತ ರಂಜನ್ ಅವರು ತಮ್ಮ ಟಿವಿ ಕಾರ್ಯಕ್ರಮದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉದಯ್ಪುರ ಕೊಲೆ ಪ್ರಕರಣದೊಂದಿಗೆ ಜೋಡಿಸಿದಕ್ಕೆ ಕ್ಷಮೆಯಾಚಿಸಿದ್ದರು ಕೂಡಾ.
ಮೈಸೂರಿಗರ ಹೋರಾಟಕ್ಕೆ ಮಣಿದ ಸರ್ಕಾರ : ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆ ರದ್ದು
ಮೈಸೂರು : ಸಾಂಸ್ಕೃತಿಕ ನಗರಿಯ ಜನರ ಹೋರಾಟಕ್ಕೆ ಮಣಿದಿರುವ ಸರ್ಕಾರ ಇದೀಗ Chamundi ropeway project ಅನ್ನು ಕೈ ಬಿಟ್ಟಿದೆ. ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಿಪಿ ಯೋಗೀಶ್ವರ್, ಯಾರೇ ವಿರೋಧಿಸಿದರೂ ಯೋಜನೆ ಜಾರಿಯಾಗಲಿದೆ ಅಂದಿದ್ದರು. 2021ರ ಜುಲೈ 21 ರಂದು ಮಾತನಾಡಿದ ಅವರು ಈ ಯೋಜನೆಗೆ ಡಿಪಿಆರ್ ಸಿದ್ದವಾಗಿದೆ ಅಂದಿದ್ದರು. ಚಾಮುಂಡಿ ಬೆಟ್ಟದ ರೋಪ್ ವೇ ಯೋಜನೆಗೆ ಸಚಿವರಾದ ಆನಂದ್ ಸಿಂಗ್, ವಿ.ಸೋಮಣ್ಣ ಕೂಡಾ ಬೆಂಬಲಿಸಿದ್ದರು.
ಆದರೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಸರ ಪ್ರಿಯರು, ಯೋಜನೆ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಿದರು. ಯೋಜನೆ ಬಂದರೆ ಆಗುವ ಅನಾಹುತಗಳನ್ನು ತಿಳಿಸಿದರು. ಈ ಕಾಮಗಾರಿಯಿಂದ ಮೈಸೂರಿನ ಜೀವ ವೈವಿಧ್ಯದ ಮೇಲೆ ಪರಿಣಾಮ ಬೀರಲಿದೆ. ಮುಂದಿನ ತಲೆಮಾರು ಸಂಕಷ್ಟಕ್ಕೆ ಸಿಲುಕಲಿದೆ ಅನ್ನುವುದನ್ನು ಸಾರಿದರು.
ಇದರ ಫಲವಾಗಿ ಸಾಹಿತಿ ಎಸ್ ಎಲ್ ಭೈರಪ್ಪ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಪ್ರವಾಸೋದ್ಯಮ ಇಲಾಖೆ ವಿರುದ್ಧ ಕಿಡಿಕಾರಿದ್ದರು. ನೆಮ್ಮದಿ ಹಾಗೂ ಆಧ್ಯಾತ್ಮಿಕತೆ ಬಯಸಿ ಬರುವ ಭಕ್ತರಿಗೆ ಪೂರಕವಾದ ವಾತಾವರಣ ಬೆಟ್ಟದಲ್ಲಿ ನಿರ್ಮಾಣವಾಗಬೇಕು. ಅಲ್ಲಿ ಯಾವುದೇ ಆಧುನಿಕ ಶೈಲಿಯ ಕಟ್ಟಡ ಕಟ್ಟಬಾರದು. ಅಲ್ಲಿನ ನೈಸರ್ಗಿಕ ಸೌಂದರ್ಯ ಉಳಿಯಬೇಕು. ಹೀಗಾಗಿ ರೋಪ್ ವೇ ಯೋಜನೆ ಕೈ ಬಿಡಿ ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ರೋಪ್ ವೇ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದ ರಾಜಮಾತೆ ಪ್ರಮೋದಾ ದೇವಿ, ಚಾಮುಂಡಿ ಬೆಟ್ಟದ 20 ನಿಮಿಷದ ಜರ್ನಿಗೆ ರೋಪ್ ವೇ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದರು. ಹೀಗೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ರೋಪ್ ವೇ ಯೋಜನೆಯನ್ನು ಕೈ ಬಿಡಲು ನಿರ್ಧರಿಸಿದೆ.
ಮೈಸೂರಿನಲ್ಲಿ ಈ ಸಂಬಂಧ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್,ಟಿ. ಸೋಮಶೇಖರ್, ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ಅಳವಡಿಕೆ ಕೈ ಬಿಟ್ಟಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತ ಪತ್ರದ ಮೂಲಕ ವಿವರಣೆ ನೀಡಲಿದೆ ಅಂದರು. ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳವಾಗುವುದಕ್ಕಿಂತ, ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಬೆಟ್ಟಕ್ಕೆ ಧಾರ್ಮಿಕ ಭಾವನೆಗಳಿಂದ ಜನ ಬರುತ್ತಾರೆ. ಹೀಗಾಗಿ ಈ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಬೇಡಿ ಅನ್ನುವುದು ಜನರ ಅಭಿಪ್ರಾಯ ಇದಕ್ಕೆ ಗೌರವ ನೀಡಿ ಯೋಜನೆಯಿಂದ ಹಿಂದೆ ಸರಿದಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.
ಒಟ್ಟಿನಲ್ಲಿ ಪರಿಸರ ಪ್ರಿಯರ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಒಟ್ಟಾಗಿ ಹೋರಾಡಿದರೆ ಸರ್ಕಾರವನ್ನು ಮಣಿಸಬಹುದು ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ
Discussion about this post