ಬಿಜೆಪಿ ಕೆಲ ದಿನಗಳ ಹಿಂದೆ ಆಂತರಿಕ ಸಮೀಕ್ಷೆ ನಡೆಸಿ ಆತಂಕಕ್ಕೆ ಒಳಗಾಗಿತ್ತು, ಕಾಂಗ್ರೆಸ್ ಆಂತರಿಕ ಸಮೀಕ್ಷೆ ಜಯಭೇರಿಯ ಮುನ್ಸೂಚನೆ ಕೊಟ್ಟಿದೆ
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಅನ್ನುವಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಜೋರಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಪರಮೇಶ್ವರ್ 6 ತಿಂಗಳ ಮುಂಚೆಯೇ ಅಭ್ಯರ್ಥಿ ಘೋಷಿಸಿದ್ರೆ, ಗೆಲುವು ಸಾಧಿಸಲು ಸುಲಭವಾಗುತ್ತದೆ ಅನ್ನುವ ಒಳ್ಳೆಯ ಸಲಹೆಯೊಂದನ್ನು ಈಗಾಗಲೇ ಕೊಟ್ಟಿದ್ದಾರೆ.
ಈ ನಡುವೆ ಕಾಂಗ್ರೆಸ್ ರಾಜಕೀಯ ಸಲಹೆಗಾರರೊಬ್ಬರು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಆಶಾದಾಯಕ ವರದಿಯೊಂದು ಸಿಕ್ಕಿದ್ದು, ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲ್ಲಲಿದೆ ಅನ್ನಲಾಗಿದೆ. ಈ ಮೂಲಕ ಸರಳ ಬಹುಮತ ಪಡೆಯಲಿರುವ ಕಾಂಗ್ರೆಸ್, ಬಿಜೆಪಿಯನ್ನು 70 ಸ್ಥಾನ ಹಾಗೂ ಜೆಡಿಎಸ್ ಅನ್ನು 25 ಸ್ಥಾನಗಳಿಗೆ ಕಟ್ಟು ಹಾಕಲಿದೆ. ಇನ್ನು 6 ರಿಂದ 8 ಪಕ್ಷೇತರರನ್ನು ಮತದಾರರು ಆರಿಸುವ ಸಾಧ್ಯತೆಗಳಿದೆ ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆ ಹೇಳಿದೆ. ಆದರೆ ಸರಳ ಬಹುಮತ ಪಡೆಯಬೇಕಾದರೆ ಸಾಮೂಹಿಕ ನಾಯಕತ್ವದಿಂದ ಮಾತ್ರ ಸಾಧ್ಯ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಇದೇ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರಿಗೆ ಶಾಕಿಂಗ್ ಸುದ್ದಿಯೊಂದು ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕು ಎಂದು ಜನ ಹೇಳಿದ್ದಾರಂತೆ.
ಹಾಗಾದ್ರೆ ಕಾಂಗ್ರೆಸ್ ಇಷ್ಟು ಸ್ಥಾನ ಪಡೆಯಲು ಹೇಗೆ ಸಾಧ್ಯ ಅನ್ನುವ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದ್ದು, ಲಿಂಗಾಯತ ಸಮುದಾಯ ಈಗಾಗಲೇ ಬಿಜೆಪಿ ಬಗ್ಗೆ ಬೇಸರಗೊಂಡಿದೆ. ಹೀಗಾಗಿ ಲಿಂಗಾಯತ ಮತದಾರರು ಬಿಜೆಪಿಯಿಂದ ವಿಮುಖರಾಗಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ದಳಪತಿಗಳ ಬಗ್ಗೆ ಅಸಮಾಧಾನಗೊಂಡಿದ್ದು, ಒಕ್ಕಲಿಗರ ಮತದಾರರು ಅನ್ಯ ಪಕ್ಷಗಳತ್ತೆ ಮುಖ ಮಾಡಿದ್ದಾರೆ. ಹೀಗಾಗಿ ಎರಡೂ ಸಮುದಾಯವನ್ನು ಕಾಂಗ್ರೆಸ್ ಕಡೆ ಸೆಳೆದರೆ ಗೆಲವು ಖಚಿತ ಅನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಬೀಸುತ್ತಿರುವುದಂತು ಸ್ಪಷ್ಟ. ಈ ಬಾರಿ ಮೋದಿಯೇ ಬಂದು ನನ್ನ ಮುಖ ನೋಡಿ ಓಟು ಹಾಕಿ ಅಂದ್ರು, ಬಿಜೆಪಿಗೆ ಓಟು ಬೀಳುವುದು ಅನುಮಾನ. ಸದಾ ಬಿಜೆಪಿಗೆ ನಿಲ್ಲುತ್ತಿರುವ ಹಿಂದುಗಳು ಕೂಡಾ ಬೊಮ್ಮಾಯಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಬೇಸರಗೊಂಡಿದ್ದಾರಂತೆ.
Discussion about this post