ನಟ, ರಾಜಕಾರಣಿ ಕಮಲಹಾಸನ್ ಅಂದರೆ ವಿವಾದ ಮೈ ಮೇಲೆ ಎಳೆದುಕೊಳ್ಳುವ ಮನುಷ್ಯ. ಈ ಪುಣ್ಯಾತ್ಮನ ಸಹೋದರರು ದೇಶದೆಲ್ಲೆಡೆ ಇದ್ದಾರೆ ಅನ್ನುವುದನ್ನು ಮರೆಯಬೇಡಿ.
ಇದೀಗ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಕಮಲಹಾಸನ್ ಮಾತನಾಡಿದ್ದಾರೆ. ಹಾಗಂತ ಅವರು ‘ದಾಳಿಯನ್ನು ವಿರೋಧಿಸಿ ಹೇಳಿಕೆ ಕೊಟ್ಟಿಲ್ಲ ಅಥವಾ ಹುತಾತ್ಮರಾದ ಯೋಧರ ಬಗ್ಗೆ ಸಾಂತ್ವನವನ್ನೂ ಹೇಳಿಲ್ಲ. ಬದಲಿಗೆ, ಆ ದಾಳಿಯನ್ನು ಉಲ್ಲೇಖಿಸಿ ಭಾರತದ ರಾಜಕಾರಣಿಗಳಿಗೆ ಉಪದೇಶ ಮಾಡಿದ್ದಾರೆ.
ಚೆನೈ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಪ್ರದೇಶವನ್ನು ಆಜಾದ್ ಕಾಶ್ಮೀರ್ ಎಂದು ಪರಿಗಣಿಸಿ. ಕಣಿವೆ ನಾಡಿನಲ್ಲಿ ಜನಮತ ಗಣನೆಗೆ ಕೇಂದ್ರ ಸರ್ಕಾರ ಹೆದರುತ್ತಿರೋದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಜನಮತಕ್ಕೆ ಅನುಗುಣವಾಗಿ ಕಾಶ್ಮೀರ ಪ್ರದೇಶದ ವಿವಾದ ಇತ್ಯರ್ಥವಾಗಬೇಕು ಎನ್ನುವ ಹಳೆಯ ಹೇಳಿಕೆಯನ್ನು ಪುನಾರುಚ್ಚರಿಸಿದ್ದಾರೆ.
ಭಾರತವು ತನ್ನ ನೆರೆಯ ದೇಶಕ್ಕಿಂತ ಶ್ರೇಷ್ಠ ಎಂದು ತೋರಿಸಿಕೊಳ್ಲಲು ಇಚ್ಛಿಸುವುದಾದರೆ ಈಗ ವರ್ತಿಸುವ ರೀತಿಯಲ್ಲಿಇರಬಾರದು. ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತ ಆಂದೋಲನ ನಡೆಸಿ ಸೈನಿಕರು ಸಾಯುವುದನ್ನು ತಪ್ಪಿಸಬೇಕು. ಭಾರತ ಮತ್ತು ಪಾಕಿಸ್ತಾನ ಎರಡು ಕಡೆಯ ರಾಜಕೀಯ ನಾಯಕರುಗಳು ಸೂಕ್ಷವಾಗಿ ಮತ್ತು ಸರಿಯಾಗಿ ನಡೆದುಕೊಂಡರೆ ಎರಡೂ ಕಡೆಯ ಸೈನಿಕರು ಸಾಯುವ ಅಗತ್ಯ ಇರುವುದಿಲ್ಲ. ಆಗ ಗಡಿ ನಿಯಂತ್ರಣ ರೇಖೆಯು ನಿಜವಾಗಿಯೂ ನಿಯಂತ್ರಣದಲ್ಲಿರುತ್ತದೆ ಎಂದಿದ್ದಾರೆ.
ಅಷ್ಟಕ್ಕೆ ನಿಂತಿಲ್ಲ ಸೈನಿಕರು ಕಾಶ್ಮೀರಕ್ಕೆ ತೆರಳೋದೇ ಸಾಯುವುದಕ್ಕೆ ಎಂದು ಬಹುಭಾಷಾ ನಟ, ರಾಜಕಾರಣಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
64 ವರ್ಷದ ಕಮಲಹಾಸನ್ ನಟ ಕಮ್ ರಾಜಕಾರಣಿ ಎಂದು ಕರೆಸಿಕೊಂಡಿದ್ದಾರೆ. ಈಗಾಗಲೇ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರಂತೆ.
ಹೀಗೆ ಸ್ವಲ್ಪ ದಿನ ಕಾಯ್ತಾ ಇರಿ, ನಾನೇ ಮುಂದಿನ ಪ್ರಧಾನಿ ಎಂದು ಕಮಲಹಾಸನ್ ಹೇಳುವುದರಲ್ಲಿ ಸಂಶಯವೇ ಇಲ್ಲ.
Discussion about this post