ವಿಟ್ಲ : ಮೊನ್ನೆ ಮೊನ್ನೆ ಅಡಕೆ ದರ ಏರಿದಾಗ ಖುಷಿಯಾಗಬೇಕಾಗಿದ್ದ ಅಡಕೆ ಬೆಳೆಗಾರರು ಕಂಗಲಾಗಿದ್ದರು. ಅಂಗಳದಲ್ಲಿದ್ದ ಅಡಕೆಯನ್ನು ಕಳ್ಳರಿಂದ ರಕ್ಷಿಸೋದು ಹೇಗೆ ಅನ್ನುವುದು ಅವರ ತಲೆನೋವಾಗಿತ್ತು. ಇದೀಗ ಕೋಳಿ ಅಂಗಡಿ ಮಾಲೀಕರ ಸರದಿ.
ಕೊರೋನಾ ಭಯದಿಂದ ಚಿಕನ್ ಫಾರಂನವರು ಈ ಬಾರಿ ಹೊಸ ಮರಿಗಳನ್ನು ಹಾಕಿಲ್ಲ. ಹೀಗಾಗಿ ಮಾರುಕಟ್ಟೆಗೆ ಕೋಳಿ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಕೋಳಿ ಮಾಂಸದ ದರ ಏರಿಕೆಯಾಗಲಾರಂಭಿಸಿದೆ. ಇದರ ಲಾಭ ಪಡೆಯಲು ಹೊರಟಿರುವ ಖದೀಮರು ಕೋಳಿಯಂಗಡಿಗೆ ಕನ್ನ ಹಾಕಲಾರಂಭಿಸಿದ್ದಾರೆ.
ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಅನಂತಾಡಿ ಎಂಬಲ್ಲಿನ ಗೋಳಿಕಟ್ಟೆಯ ಚಿಕನ್ ಸ್ಟಾಲ್ ಹೊರಗಡೆ ಇರಿಸಲಾಗಿದ್ದ ಪಂಜರದಿಂದ 50ಕ್ಕೂ ಅಧಿಕ ಕೋಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಚಿಕನ್ ಸ್ಟಾಲ್ ಮಾಲೀಕರು ಎಂದಿನಂತೆ ಬುಧವಾರ ಬೆಳಗ್ಗೆ ಬಾಗಿಲು ತೆರೆದು ಪಂಜರ ನೋಡಿದಾಗ 75 ಕೆಜಿಯಷ್ಟು ಕೋಳಿ ಕಳ್ಳತನವಾಗಿದೆ.
ಇದೀಗ ಟೈಸನ್ ಕೋಳಿ ಮಾಂಸಕ್ಕೆ ಕೆಜಿಗೆ 250 ಇದ್ದು, ಬ್ರಾಯ್ಲರ್ ಕೋಳಿ ಮಾಂಸಕ್ಕೆ 180ರಷ್ಟಿದೆ.
Discussion about this post