ತುಮಕೂರು : ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವರು ಈ ಫೋಟೋಗಳನ್ನು ಅಸಹ್ಯವಾಗಿ, ಮಾನವೀಯತೆ ಇಲ್ಲದಂತೆ ಟ್ರೋಲ್ ಮಾಡಿದ್ದರು. ಮತ್ತೆ ಕೆಲವರು ಸಾಮಾಜಿಕ ಕಳಕಳಿಯನ್ನು ಮುಂದಿಟ್ಟಿದ್ದರು. ಇನ್ನು ಕೆಲವರು ಆ ಹುಡುಗಿ ಮನೆಯಲ್ಲಿ ಏನು ಕಷ್ಟವಿದೆಯೋ ಎಂದು ಕರುಣಿಯ ಮಾತುಗಳನ್ನಾಡಿದ್ದರು.
ಇದೀಗ ಫೋಟೋ ಎಲ್ಲಿಯದು, ಮದುವೆ ನಡೆದಿದ್ದು ಎಲ್ಲಿ ಅನ್ನುವ ವಿಷಯಗಳು ಬಹಿರಂಗವಾಗಿದ್ದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಅಕ್ಕಿಮರಿಪಾಳ್ಯದಲ್ಲಿ ಈ ಮದುವೆ ನಡೆದಿದ್ದು, ವಧುವಿನ ಇಚ್ಛೆಯಂತೆ ಈ ಮದುವೆ ನಡೆದಿದೆ, ಯಾವುದೇ ಒತ್ತಾಯವಿರಲಿಲ್ಲ ಎಂದು ಗ್ರಾಮಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ವಧುವಿನ ಹೆಸರು ಮೇಘನಾ ಹಾಗೂ ವರನ ಹೆಸರು ಶಂಕರಣ್ಣ ಎಂದು ಗೊತ್ತಾಗಿದೆ. 25ರ ಹರೆಯದ ಮೇಘನಾ 45ರ ಹರೆಯದ ಶಂಕರಣ್ಣ ಬಳಿ ಹೋಗಿ ಮದುವೆಯಾಗಿ ಅಂತಾ ಕೇಳಿಕೊಂಡಿದ್ದಾಳೆ. ಈ ವೇಳೆ ಅವಿವಾಹಿತರಾಗಿರುವ ಶಂಕರಣ್ಣ ಮದುವೆಗೆ ಸಮ್ಮತಿಸಿದ್ದಾರೆ ಅನ್ನಲಾಗಿದೆ.
ಶಂಕರಣ್ಣ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಅಕ್ಕಿಮರಿಪಾಳ್ಯದ ನಿವಾಸಿಯಾಗಿದ್ದು, ಮೇಘನಾ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದಾರೆ.
ಈಕೆಗೆ ಈ ಹಿಂದೆ ಬೇರೆಯವರ ಜೊತೆ ಮದುವೆಯಾಗಿತ್ತು, ಪತಿ ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದಾರೆ ಅನ್ನಲಾಗಿದೆ. ಹೀಗಾಗಿ ಮತ್ತೊಂದು ಮದುವೆಗೆ ಮೇಘನಾ ಒಲವು ತೋರಿಸಿ ಮೇಘನಾಳೇ ಹೋಗಿ 45 ವರ್ಷದ ವ್ಯಕ್ತಿಯನ್ನು ವರಿಸಿದ್ದಾಳಂತೆ.
ಇನ್ನಾದರೂ ತಮ್ಮ ಇಚ್ಛೆಯಂತೆ ಮದುವೆಯಾದ ಇಬ್ಬರನ್ನು ಟ್ರೋಲ್ ಮಾಡಿ ಹಿಂಸಿಸುವ ಮನಸ್ಥಿತಿ ಜನರಲ್ಲಿ ಕಡಿಮೆಯಾದರೆ ಸಾಕು.
Discussion about this post