ನವದೆಹಲಿ : ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕೊಡಮಾಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ ಡಾ. ಬಿ ಎಂ ಹೆಗ್ಡೆ ಸ್ವೀಕರಿಸಿದ್ದಾರೆ. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಿದರು.

ಡಾ. ಬಿ ಎಂ ಹೆಗ್ಡೆ ಎಂದೇ ಪರಿಚಿತರಾಗಿರುವ ಅವರ ಪೂರ್ಣ ಹೆಸರು ಬೆಳ್ಳೆ ಮೋನಪ್ಪ ಹೆಗ್ಡೆ. ಉಡುಪಿ ಜಿಲ್ಲೆಯ ಬೆಳ್ಳೆ ಎಂಬಲ್ಲಿ. 1938 ಆಗಸ್ಟ್ 18ರಂದು ಜನಿಸಿದ್ದ ಹೆಗ್ಡೆಯವರಿಗೆ ಈಗ 83 ವರ್ಷ.
ಉಡುಪಿಯ ಹಿರಿಯಡ್ಕದ ಬೋರ್ಡ್ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಿಎಂ ಹೆಗ್ಡೆ ನಂತರ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದ್ದರು. 1960ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ MBBS ಪದವಿ ಪಡೆದರು.ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂಡಿ ಪದವಿ ಪಡೆದ ಅವರು, ಉನ್ನತ ಶಿಕ್ಷಣವನ್ನು ಲಂಡನ್ ನಲ್ಲಿ ಪಡೆದರು, ನೊಬೆಲ್ ಪಾರಿತೋಷಕ ಪುರಸ್ಕೃತ ಪ್ರೊ. ಬೆರ್ನಾರ್ಡ್ ಲೋವ್ನ್ ಅವರೊಂದಿಗೆ ಸೇವೆ ಸಲ್ಲಿಸಿದ ಹಿರಿಮೆ ಹೆಗ್ಡೆಯವರದ್ದು. ಲಂಡನ್ ಕಾಲೇಜಿನ MRCP ಪರೀಕ್ಷಕರಾಗಿ ಆಯ್ಕೆಯಾದ ಮೊದಲ ಭಾರತೀಯ ಅನ್ನುವ ಗೌರವವೂ ಬಿಎಂ ಹೆಗ್ಡೆಯವರಿಗೆ ಸಂದಿದೆ.

ಮಣಿಪಾಲ ಕಸ್ತೂರ್ ಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಡೀನ್ ಆಗಿ ಮಾಹೆ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ ಡಾ. ಬಿ.ಎಂ. ಹೆಗ್ಡೆ ಹೃದ್ರೋಗ ತಜ್ಞ, ಉಪನ್ಯಾಸಕ, ಪರೀಕ್ಷಕ, ಸಂಶೋಧಕ, ಬರಹಗಾರ, ಲೇಖಕ, ಶಿಕ್ಷಣ ತಜ್ಞ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
1999ರಲ್ಲಿ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಬಿ.ಸಿ.ರಾಯ್ ಪ್ರಶಸ್ತಿ ಪಡೆದ ಹೆಗ್ಡೆಯವರು 1997ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ಲಂಡನ್ ಥೇಮ್ಸ್ ವ್ಯಾಲಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಕಾರಣಕರ್ತರಾಗಿದ್ದಾರೆ.ಪ್ರಸ್ತುತ ಭಾರತೀಯ ವಿದ್ಯಾಭವನದ ಮಂಗಳೂರು ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ಡಾ. ಬಿಎಂ ಹೆಗ್ಡೆಯವರು ವೀಲ್ ಚೇರ್ ನಲ್ಲಿ ಬಂದು ಪ್ರಶಸ್ತಿ ಸ್ವೀಕರಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಹೆಗ್ಡೆಯವರು ನಡೆಯುವ ಸಾಮರ್ಥ್ಯವನ್ನೂ ಹೊಂದಿದ್ದರೂ ವೀಲ್ ಚೇರ್ ನಲ್ಲಿ ಬಂದಿದ್ಯಾಕೆ ಅನ್ನುವುದು ಹಲವರ ಪ್ರಶ್ನೆ. ಆದರೆ ಮಾಹಿತಿಗಳ ಪ್ರಕಾರ ಹೊಸ ಜಾಗದಲ್ಲಿ ವಯಸ್ಸಿನ ಕಾರಣದಿಂದ ನಡೆಯಲು ತೊಂದರೆಯಾಗಬಹುದು ಹೀಗಾಗಿ ರಾಷ್ಟ್ರಪತಿ ಶಿಸ್ತಿಗೆ ಅಡ್ಡಿಯಾಗಬಹುದೆಂದು ವೀಲ್ ಚೇರ್ ನಲ್ಲಿ ಬಂದು ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಿಎಂ ಹೆಗ್ಡೆಯವರು ವೀಲ್ ಚೇರ್ ಕೂತ ಶೈಲಿಯಲ್ಲೇ ಗೊತ್ತಾಗುತ್ತಿತ್ತು ಅದು ಅವರಿಗೆ ಹೊಸ ಅನುಭವ ಅಂತಾ.
Discussion about this post