ಜೈಪುರ : ಪ್ರವಾದಿ ಮೊಹಮ್ಮದರ ಕುರಿತಂತೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ ಹೇಳಿಕೆಯನ್ನು ಸಮರ್ಥಿಸಿ ಸಾಮಾಜಿಕ ಜಾಲದಲ್ಲಿ ಹಾಕಲಾಗಿದ್ದ ಪೋಸ್ಟ್ ಅನ್ನು ಶೇರ್ ಮಾಡಿದ್ದ ಟೈಲರ್ ಕನ್ನಯ್ಯಾ ಲಾಲ್ ಎಂಬಾತನನ್ನು ಮಂಗಳವಾರ ಮಧ್ಯಾಹ್ನ ಕೊಲೆ ಮಾಡಲಾಗಿದೆ.
ಪ್ರಕರಣ ಇಡೀ ದೇಶವನ್ನು ತಲ್ಲಣಗೊಳಿಸುತ್ತಿದ್ದಂತೆ, ಕೊಲೆ ನಡೆದ ರಾಜಸ್ಥಾನದ ಉದಯಪುರ ಉದ್ನಿಗ್ನಗೊಳ್ಳಲಾರಂಭಿಸಿತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕರ್ಫ್ಯೂ ಜಾರಿಗೊಳಿಸಿ ಇಂಟರ್ ನೆಂಟ್ ಸ್ಥಗಿತಗೊಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.
ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಸಮೀಪದ ರಾಜ್ ಸಮಂದ್ ಜಿಲ್ಲೆಯಲ್ಲಿ ಕೊಲೆಯ ಆರೋಪಿಗಳಾದ ರಿಯಾಜ್ ಅಖ್ತಾರಿ ಮತ್ತು ಗೌಸೆ ಮಹಮ್ಮದ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಇದೇ ಆರೋಪಿಗಳು ಟೈಲರ್ ತಲೆ ಕಡಿದ ಬಳಿಕ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಘಟನೆಯನ್ನು ಹೊಣೆ ಹೊತ್ತುಕೊಂಡಿದ್ದು ಮಾತ್ರವಲ್ಲದೆ, ನರೇಂದ್ರ ಮೋದಿಯವರನ್ನು ಕೊಲ್ಲುವ ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ಇದೀಗ ಎನ್ಐಎ ತಂಡವನ್ನೂ ಕೂಡಾ ಕಳುಹಿಸಿಕೊಟ್ಟಿದೆ. ಮತ್ತೊಂದು ಕಡೆ ಕನ್ನಯ್ಯ ಲಾಲ್ ತನಗೆ ಬೆದರಿಕೆ ಕರೆ ಬರುತ್ತಿದೆ ಎಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ. ಹಾಗಿದ್ದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದರು. ಹೀಗಾಗಿ ಇದೀಗ ಎಎಸ್ಐ ಒಬ್ಬರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಅಮಾಯಕನೊಬ್ಬನನ್ನು ಕೊಲೆ ಮಾಡಿದ ಮತಾಂಧರು, ದೇಶದ ಪ್ರಧಾನಿಯನ್ನೇ ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ಹಾಗಿದ್ದರೂ ಅಂದು ಕಲ್ಲಂಗಡಿ ಕೊಚ್ಚಿದಕ್ಕೆ ಕಣ್ಣೀರಿಟ್ಟ ಕಾರ್ಟೋನಿಸ್ಟ್ ಗಳು ಇಂದು ಕುತ್ತಿಗೆಯನ್ನೇ ಕತ್ತಿಯಿಂದ ಕೊಯ್ದಾಗ ತಮ್ಮ ಕುಂಚಕ್ಕೆ ರೆಸ್ಟ್ ಕೊಟ್ಟಿರುವುದು ವಿಪರ್ಯಾಸ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದೆ.
Discussion about this post