ನವದೆಹಲಿ : ರೈಲು ವಿಳಂಭದಿಂದ ವಿಮಾನ ತಪ್ಪಿಸಿಕೊಂಡ ಪ್ರಯಾಣಿಕರೊಬ್ಬರಿಗೆ 30 ಸಾವಿರ ದಂಡ ಪಾವತಿಸುವಂತೆ ರೈಲ್ವೆ ಇಲಾಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಜೊತೆಗೆ ತನ್ನ ನಿಯಂತ್ರಣ ಮೀರಿ ರೈಲು ಸಂಚಾರದಲ್ಲಿ ವಿಳಂಬವಾಗಿ ಅದರಿಂದ ಪ್ರಯಾಣಿಕರಿಗೆ ತೊಂದರೆಯಾದರೆ, ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
2016ರಲ್ಲಿ ಸಂಜಯ್ ಶುಕ್ಲಾ ಅನ್ನುವವರು ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ತೆರಳುವ ಸಲುವಾಗಿ ಅಜ್ಮೀರ್ – ಜಮ್ಮು ಏಕ್ಸ್ ಪ್ರೆಸ್ ರೈಲು ಮೂಲಕ ಜಮ್ಮುಗೆ ಬಂದಿಳಿದಿದ್ದರು. ಆದರೆ ರೈಲು 4 ಗಂಟೆಗಳ ಕಾಲ ವಿಳಂಭವಾಗಿ ಜಮ್ಮು ತಲುಪಿತ್ತು. ಹೀಗಾಗಿ ಸಂಜಯ್ ಶುಕ್ಲಾ ಅವರಿಗೆ ವಿಮಾನ ಕ್ಯಾಚ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಟ್ಯಾಕ್ಸಿ ಮೂಲಕ ಅವರು ಶ್ರೀನಗರಕ್ಕೆ ತೆರಳಿದ್ದರು.
ಇದಾದ ಬಳಿಕ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ಶುಕ್ಲಾ ಪರಿಹಾರಕ್ಕಾಗಿ ಮನವಿ ಮಾಡಿದ್ದರು. ಈ ವೇಳೆ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲೂ ಶುಕ್ಲ ಗೆಲುವು ಸಾಧಿಸಿದ್ದರು. ಹೀಗಾಗಿ ರೈಲ್ವೆ ಇಲಾಖೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಈ ವೇಳೆ ವಾದ ಮಂಡಿಸಿದ ರೈಲ್ವೆ ಇಲಾಖೆ ಪರ ವಕೀಲರು, ರೈಲು ವಿಳಂಭವಾಗಿ ಸಂಚರಿಸುವುದು ಇಲಾಖೆಯ ಲೋಪವಾಗುವುದಿಲ್ಲ ಎಂದು ವಾದಿಸಿದ್ದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ ರೈಲು ವಿಳಂಭ ಸಂಚಾರಕ್ಕೆ ಕಾರಣವೇನು ಎಂದು ಪ್ರಶ್ನಿಸಿತ್ತು. ಆದರೆ ಇದಕ್ಕೆ ಸಮರ್ಪಕ ಉತ್ತರ ಒದಗಿಸಲು Northern Western Railway ಇಲಾಖೆಗೆ ಸಾಧ್ಯವಾಗಿರಲಿಲ್ಲ.
ಹೀಗಾಗಿ ಇದೀಗ Northern Western Railway ₹15,000 ಟ್ಯಾಕ್ಸಿ ವೆಚ್ಚ, ₹10,000 ವಿಮಾನ ಟಿಕೆಟ್ ವೆಚ್ಚ, ಹಾಗೂ ಮಾನಸಿಕ ಹಿಂಸೆಗಾಗಿ ₹5,000 ಹಣವನ್ನು ಪಾವತಿಸುವಂತೆ ಆದೇಶಿಸಿದೆ.
Discussion about this post