ಬೆಂಗಳೂರು : ತಳ್ಳೋ ಗಾಡಿ ವ್ಯಾಪಾರಿಗಳ ಮೈಕ್ ಕಿತ್ತುಕೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶದ ವಿರುದ್ಧ ಬಡ ಜನರಲ್ಲಿ ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಆದೇಶದ ವಿರುದ್ಧ ಹೋರಾಡುವ ಶಕ್ತಿ ಇಲ್ಲದ ಕಾರಣ ಅವರು ಮೌನಕ್ಕೆ ಶರಣಾಗಿದ್ದರು.
ಆದರೆ ಇದೀಗ ತಳ್ಳುವ ಗಾಡಿಯ ವ್ಯಾಪಾರಿಗಳ ಪರ ಮಾಜಿ ಸಚಿವ ಸುರೇಶ್ ಕುಮಾರ್ ದನಿ ಎತ್ತಿದ್ದು, ಈ ಸಂಬಂಧ ಕಟು ಶಬ್ಧಗಳಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ. ಜೊತೆಗೆ ಆದೇಶವನ್ನು ಪರಾಮರ್ಶೆ ಮಾಡುವಂತೆ ಮನವಿಯನ್ನೂ ಮಾಡಿದ್ದಾರೆ.
ತಳ್ಳುವ ಗಾಡಿಯ ವ್ಯಾಪಾರಿಗಳ ಆರ್ಥಿಕ ಪರಿಸ್ಥಿತಿಯನ್ನು ತಾವು ಒಮ್ಮೆ ಅವಲೋಕಿಸಬೇಕಿತ್ತು, ಇವರೆಲ್ಲರೂ ತೀರಾ ಹಿಂದುಳಿದವರಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಜರ್ಜರಿತರಾದವರಾಗಿದ್ದಾರೆ. ಪ್ರತೀ ತಿಂಗಳ ಮೊದಲನೇ ದಿನ ಇವರಿಗೆ ಸಂಬಳ ಬಂದು ಬೀಳುವುದಿಲ್ಲ, ಮಳೆ, ಚಳಿ ಗಾಳಿ ಲೆಕ್ಕಿಸದೆ ಅದೆಷ್ಟು ಕಿಲೋಮೀಟರ್ ದೂರ ನಡೆಯುತ್ತಾರೆ ಅನ್ನುವುದು ತಮ್ಮ ಗಮನಕ್ಕೆ ಬರಬೇಕಿತ್ತು ಎಂದು ಅಕ್ಷರಗಳಲ್ಲೇ ಚಾಟಿ ಬೀಸಿರುವ ಸುರೇಶ್ ಕುಮಾರ್, ನಿಮ್ಮ ಹೊಯ್ಸಳ ಗಾಡಿಗಳಿಂದ ಬರುವ ಸೈರನ್ ನಿಂದ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟರೆ ಅದನ್ನು ನಿಲ್ಲಿಸಿ ಬಿಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಬೆಂಗಳೂರು ಪೊಲೀಸರ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ಸುರೇಶ್ ಕುಮಾರ್, 2017ರ ನವೆಂಬರ್ ತಿಂಗಳಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲು ಬರುವುದನ್ನು ಹೋಗುವುದನ್ನು ಧ್ವನಿ ವರ್ಧಕದ ಮೂಲಕ ತಿಳಿಸುತ್ತಾರೆ. ಅದರಿಂದ ನಮ್ಮ ನೆಮ್ಮದಿಗೆ ಭಂಗ ಬರುತ್ತದೆ ಎಂದು ನಾಗರಿಕರೊಬ್ಬರು ನಿಮ್ಮ ಕಂಟ್ರೋಲ್ ರೂಮ್ ಗೆ ದೂರು ಕೊಟ್ಟಿದ್ದಕ್ಕೆ ತಮ್ಮ ಪೊಲೀಸರು ನಿಲ್ದಾಣದ ಮುಖ್ಯಸ್ಥರನ್ನು ಪೊಲೀಸ್ ಸ್ಟೇಷನ್ ಗೆ ಕರೆಸಿ, ಇಡೀ ದಿನ ಸ್ಟೇಷನ್ ನಲ್ಲಿ ‘ಕೊಳೆ’ ಹಾಕಿದ ಘಟನೆ ನನ್ನ ನೆನಪಿನಲ್ಲಿದೆ ಅಂದಿದ್ದಾರೆ.
ಇದೇ ವೇಳೆ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಸುರೇಶ್ ಕುಮಾರ್ ತಳ್ಳುವ ಗಾಡಿ ವ್ಯಾಪಾರಿಗಳ ಅಹವಾಲು ಕೇಳದೆ ನಿರ್ಧಾರ ಕೈಗೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಹಾಗೇ ನೋಡಿದರೆ ಸುರೇಶ್ ಕುಮಾರ್ ಅವರು ಎತ್ತಿರುವ ಪ್ರಶ್ನೆಗಳು ಸರಿಯಾಗಿದೆ. ಮೈಕ್ ವಿಚಾರದಲ್ಲಿ ಕೈಗೊಳ್ಳಬೇಕಾದ ಅನೇಕ ವಿಷಯಗಳಿದೆ. ಕೋರ್ಟ್ ಆದೇಶವೇ ಇನ್ನೂ ಜಾರಿಯಾಗಿಲ್ಲ. ಆದರೆ ಅವೆಲ್ಲವನ್ನೂ ಸೈಡಿಗಿಟ್ಟು ಬಡ ವ್ಯಾಪಾರಿಗಳ ಮೈಕ್ ಕಿತ್ತುಕೊಳ್ಳುವುದು ಯಾವ ನ್ಯಾಯ. ಖಂಡಿತಾ ಮಕ್ಕಳಿಗೆ ವೃದ್ಧರಿಗೆ ಇದರಿಂದ ಸಮಸ್ಯೆಯಾಗುತ್ತದೆ, ಈ ವೇಳೆ ವ್ಯಾಪಾರಿಗಳನ್ನು ಕರೆದು ಸೌಂಡ್ ಕಡಿಮೆ ಇಟ್ಟುಕೊಳ್ಳಿ, ಜನರಿಗೆ ಇದರಿಂದ ಆಗುವ ಸಮಸ್ಯೆಗಳೇನು ಎಂದು ಠಾಣಾ ವ್ಯಾಪ್ತಿಯಲ್ಲಿ ವಿವರಿಸಬಹುದಿತ್ತು.
ಇನ್ನು ಸುರೇಶ್ ಕುಮಾರ್ ಪತ್ರಕ್ಕೆ, ರಸ್ತೆಗಳಲ್ಲಿ ಓಡಾಡುವ ವಾಹನಗಳ ಹಾರ್ನ್ ಗಳನ್ನೇ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ಬಡವರ ಹೊಟ್ಟೆ ಮೇಲೆ ಹೊಡೆದಿದೆ, ಕೊರೋನಾ ಕಾಲದಲ್ಲಿ ಮೈಕ್ ಇಲ್ಲದೆ ಕೂಗಿದ್ರೆ ಎಂಜಲು ತರ್ಕಾರಿ ಮೇಲೆ ಬೀಳುತ್ತದೆ. ಹೀಗೆ ತರತರದ ಕಮೆಂಟ್ ಗಳು ಬಂದಿದೆ.
Discussion about this post