ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಮುನ್ನಲೆಗೆ ಬಂದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಹೆಸರು ಐಪಿಎಸ್ ಅಧಿಕಾರಿ ಎಸ್.ಶ್ರೀಜಿತ್ ರದ್ದು. ಶಬರಿಮಲೆಯಲ್ಲಿ ಭದ್ರತೆ ಪೂರ್ತಿ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀಜಿತ್, ಸುಪ್ರೀಂಕೋರ್ಟ್ ಆದೇಶ ಜಾರಿಗೆ ನಿಂತಿದ್ದರು.
ಕೆಲ ದಿನಗಳ ಹಿಂದೆ ರೆಹನಾ ಫಾತಿಮಾ ಮತ್ತು ಪತ್ರಕರ್ತೆ ಕವಿತಾ ಶಬರಿಮಲೆ ಪ್ರವೇಶಕ್ಕೆ ಬಂದಾಗ ಅವರನ್ನು ಎಸ್ಕಾರ್ಟ್ ಮಾಡಿಕೊಂಡು ಬಂದದ್ದು ಇದೇ ಶ್ರೀಜಿತ್.
ಹರಿಹರಸುತನ ಸನ್ನಿಧಿಯಲ್ಲಿ ಭಕ್ತರ ಆಕ್ರೋಶ ಸಿಡಿ ಗುಂಡಿನಂತೆ ಕಾಣಿಸುತ್ತಿತ್ತು. ಬೇರೆ ಯಾವುದೋ ಸಂದರ್ಭವಾಗಿದ್ದರೆ ಲಾಠಿ ಎತ್ತಿಕೊಳ್ಳಲು ಶ್ರೀಜಿತ್ ಆದೇಶ ನೀಡುತ್ತಿದ್ದರು. ಆದರೆ ಇದೊಂದು ಸೂಕ್ಷ್ಮ ವಿಚಾರವಾಗಿದ್ದ ಕಾರಣ, ಎಲ್ಲವನ್ನೂ ಅಳೆದು ತೂಗಿ ನಿಭಾಯಿಸಬೇಕಾಗಿತ್ತು. ಒಂದಿಷ್ಟು ಹೆಚ್ಚು ಕಡಿಮೆಯಾದರೆ ಊಹಿಸಲು ಅಸಾಧ್ಯವಾದ ಘಟನೆಗೆ ಸನ್ನಿಧಾನ ಸಾಕ್ಷಿಯಾಗಬೇಕಾಗುತ್ತದೆ ಅನ್ನುವ ಅರಿವು ಅವರಿಗಿತ್ತು.
ಹೀಗಾಗಿ ಜಾಣ ನಡೆಯನ್ನು ಶ್ರೀಜಿತ್ ಅನುಸರಿಸುತ್ತಿದ್ದರು. ಪ್ರತಿಯೊಂದು ಹೆಜ್ಜೆ ಇಡುವ ಮುನ್ನ ಸಾಧಕ ಬಾಧಕ ಯೋಚಿಸಿ, ಸಾವಿರ ಸಲ ಚಿಂತಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು. ಅದ್ಯಾವ ಮಹಿಳೆಯೂ ಶಬರಿಮಲೆಗೆ ಹೋಗ್ತಿನಿ ಎಂದು ಬಂದರೆ ನಾವು ಕಾನೂನು ಪರಿಪಾಲಕರು, ಭದ್ರತೆ ನಾವು ಕೊಡಲು ಸಿದ್ದ ಅನ್ನುತ್ತಿದ್ದರು. ಆದರೆ ಅದು ಎಲ್ಲಿಯ ತನಕ ಭದ್ರತೆ ಅನ್ನುವುದನ್ನು ಅವರು ಸ್ಪಷ್ಟವಾಗಿ ಹೇಳಿದ್ದರು. ಸನ್ನಿಧಾನದ ಮೆಟ್ಟಿಲ ತನಕ ಭದ್ರತೆ ಕೊಡಲು ಸಾಧ್ಯ. ಮೆಟ್ಟಿಲು ಹತ್ತಿಸಲು ಸಾಧ್ಯವಿಲ್ಲ ಅನ್ನುವುದನ್ನು ಪರೋಕ್ಷವಾಗಿ ತಿಳಿಸುತ್ತಿದ್ದರು.
ರೆಹನಾ ಫಾತಿಮಾ ಮತ್ತು ಪತ್ರಕರ್ತೆ ಕವಿತಾ ಮಲೆಗೆ ಬಂದ ವೇಳೆಯಲ್ಲೂ ಹೀಗೆ ಆಗಿದೆ. ಇಬ್ಬರು ಯುವತಿಯರನ್ನು ಕಂಡ ವೇಳೆ ಪ್ರತಿಭಟನೆ ತೀವ್ರಗೊಂಡಿತು. ನಾನು ಕೂಡಾ ಅಯ್ಯಪ್ಪನ ಭಕ್ತ, ಆದರೆ ನನಗೆ ಕಾನೂನು ಪಾಲನೆ ಆದ್ಯತೆಯಾಗಿದೆ ಎಂದು ಪ್ರತಿಭಟನಾ ನಿರತ ಭಕ್ತರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.
ಈ ನಡುವೆ 5 ದಿನಗಳ ತಿಂಗಳ ಪೂಜೆ ಸಲುವಾಗಿ ತೆರೆಯಲ್ಪಟ್ಟ ಅಯ್ಯಪ್ಪನ ಗರ್ಭ ಗುಡಿಯ ಬಾಗಿಲು ಮುಚ್ಚುವ ದಿನವಾದ ಇಂದು ಸನ್ನಿಧಾನಕ್ಕೆ ಜನ ಸಾಮಾನ್ಯರಂತೆ ಭೇಟಿ ಕೊಟ್ಟ ಐಜಿ ಶ್ರೀಜಿತ್, ಸಾಕಷ್ಟು ಸಮಯವನ್ನು ಅಯ್ಯಪ್ಪನ ಸನ್ನಿಧಿಯಲ್ಲಿ ಕಳೆದಿದ್ದಾರೆ.
ಮುಂಜಾನೆಯೇ ಅಯ್ಯಪ್ಪನ ಗರ್ಭಗುಡಿ ಸಮೀಪಕ್ಕೆ ಬಂದ ಅವರು ಭಾವುಕರಾಗಿ ಪ್ರಾರ್ಥಿಸಿದ ದೃಶ್ಯ ಕೇರಳದ ಟಿವಿ ವಾಹಿನಿಯೊಂದಕ್ಕೆ ಸಿಕ್ಕಿದೆ. ಐಪಿಎಸ್ ಅಧಿಕಾರಿ ಶ್ರೀಜಿತ್ ಅಯ್ಯಪ್ಪನ ಗರ್ಭಗುಡಿ ಮುಂದೆ ಕಣ್ಣೀರಿಟ್ಟ ದೃಶ್ಯವೂ ಇದರಲ್ಲಿ ಸೇರಿದೆ.
ಅದೇನು ಪ್ರಾರ್ಥಿಸಿದರೋ ಗೊತ್ತಿಲ್ಲ, ಆದರೆ ಅವರ ಕಣ್ಣೀರು ಮಾತ್ರ ಯಾವುದನ್ನೂ ಸೂಚಿಸಿತ್ತೋ ಗೊತ್ತಿಲ್ಲ. ಅದು ಅಯ್ಯಪ್ಪ ಮತ್ತು ಶ್ರೀಜಿತ್ ಗೆ ಮಾತ್ರ ಗೊತ್ತು. ಪೊಲೀಸ್ ಸಮವಸ್ತ್ರವಿಲ್ಲದೆ, ಜನಸಾಮಾನ್ಯರಂತೆ ಅಯ್ಯಪ್ಪನ ಗರ್ಭಗುಡಿ ಮುಂಭಾಗಕ್ಕೆ ಬಂದ ಅವರ ಕಣ್ಣೀನಿಂದ ಕಣ್ಣೀರು ಕೋಡಿಯಾಗಿ ಹರಿದಿತ್ತು.
ಸಮವಸ್ತ್ರ ಧರಿಸಿ, ಎದೆಯುಬ್ಬಿಸಿ ನಡೆಯುವ ಶ್ರೀಜಿತ್ ಇವರೇನಾ ಅನ್ನುವ ಪ್ರಶ್ನೆ ಮೂಡಿಸಿದ್ದು ಸುಳ್ಳಲ್ಲ. ಹಾಗಾದರೆ ಐಪಿಎಸ್ ಅಧಿಕಾರಿ ಕಣ್ಣೀರಡಬಾರದೇ…. ಅವರು ಮನುಷ್ಯರೇ ತಾನೇ..ಅವರಿಗೂ ಮನಸ್ಸಿದೆ ತಾನೇ.
[youtube https://www.youtube.com/watch?v=EY4r38KXL1c&w=640&h=360]
Discussion about this post