ತಮಿಳುನಾಡು ವಿಧಾನಸಭೆ ಚುನವಣಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಇದೀಗ ಇವಿಎಂ ಯಂತ್ರದಲ್ಲಿ ಭದ್ರವಾಗಿದೆ. ಮತದಾನ ಮುಗಿಯೋ ಕೊನೆ ಕ್ಷಣದವರೆಗೂ ಎಲ್ಲಾ ರಾಜಕೀಯ ಪಕ್ಷಗಳು ಮತದಾರನ ಗಮನ ಸೆಳೆಯಲು ಇನ್ನಿಲ್ಲದ ಸರ್ಕಸ್ ನಡೆಸಿತ್ತು.
ಈ ನಡುವೆ ಗೆಲವು ಖಚಿತ ಅಂದುಕೊಂಡಿದ್ದ ಕ್ಷೇತ್ರವೊಂದರಲ್ಲಿ ಡಿಎಂಕೆ ಪಕ್ಷ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಿದೆ. ಅಭ್ಯರ್ಥಿಯ ತಾಯಿಯೇ ಮಗಳಿಗೆ ಮತ ಹಾಕಬೇಡಿ ಆಕೆ ಮಹಾಭ್ರಷ್ಟೆ ಎಂದು ಸಾರ್ವಜನಿಕವಾಗಿ ಸಾರಿರುವುದೇ ದೊಡ್ಡ ಸಮಸ್ಯೆಯಾಗಿದೆ.
ಅಲಂಗುಲಂ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವಿಗಾಗಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಡಿಎಂಕೆ ಪಕ್ಷದಿಂದ ಪುಂಜೋಥೈ ಅಳಾದಿ ಅರುಣಾ ಸ್ಪರ್ಧೆಗೆ ಇಳಿದಿದ್ದಾರೆ, ಎಐಎಡಿಎಂಕೆ ಪಕ್ಷ ಮಾಜಿ ರಾಜ್ಯ ಸಭಾ ಹಾಗೂ ಮಾಜಿ ಶಾಸಕರಾಗಿರುವ ಮನೋಜ್ ಪಾಂಡ್ಯನ್ ಅವರನ್ನು ಕಣಕ್ಕಿಳಿಸಿದೆ.
ಅಳಾದಿ ಅರುಣಾ 2006 ಮತ್ತು 2016ರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2011 ರಲ್ಲಿ ಎಐಎಡಿಎಂಕೆ ಇಲ್ಲಿ ಗೆಲುವು ಸಾಧಿಸಿತ್ತು.
ಈ ನಡುವೆ ಚುನಾವಣೆಗೆ ಕೆಲವೇ ಗಂಟೆಗಳಿರುವ ಸಂದರ್ಭದಲ್ಲಿ ಅಳಾದಿ ಅರುಣಾ ತಾಯಿ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಮಗಳ ವಿರುದ್ಧವೇ ಮಾತನಾಡಿರುವ ತಾಯಿ ಕಮಲಾ ಅಳಾದಿ ಅರುಣ, ನನ್ನ ಮಗಳು ಮಹಾ ಭ್ರಷ್ಟೆಯಾಗಿದ್ದು, ಆಕೆಗೆ ಮತ ನೀಡಬೇಡಿ. ಆಕೆ ಗೆಲ್ಲಬಾರದೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನನ್ನ ಗಂಡ ಅಳಾದಿ ಅರುಣ ಅವರು ಶಾಸಕರಾಗಿದ್ದ ವೇಳೆ ಎಲ್ಲವೂ ಚೆನ್ನಾಗಿತ್ತು. ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದರು. ಈ ಕ್ಷೇತ್ರದಲ್ಲಿ ಸಾಕಷ್ಟು ಅಕ್ಕಿ ಮಿಲ್ ತಲೆ ಎತ್ತಿವೆ ಅಂದ್ರೆ ಅದಕ್ಕೆ ನನ್ನ ಪತಿ ಕಾರಣ. ಅವರು ಎಂದಿಗೂ ಲಂಚಕ್ಕಾಗಿ ಕೈ ಒಡ್ಡಿದವರಲ್ಲ. ಆದರೆ ನನ್ನ ಮಗಳು ತಂದೆಯ ಹಾಗಲ್ಲ. ರೆಸಾರ್ಟ್ ನಿರ್ಮಾಣ, ಲ್ಯಾಂಡ್ ಮಾಫಿಯಾಗಳೇ ಆಕೆಯ ವ್ಯವಹಾರವಾಗಿದೆ.
ಆಕೆಯ ತಂದೆ ಕೊಲೆಯಾದ ವೇಳೆಯಲ್ಲೂ ನನಗೆ ಆಕೆ ಸಹಕಾರ ನೀಡಲಿಲ್ಲ. ನಮ್ಮ ಶಾಲೆ ಮತ್ತು ನನ್ನ ಮಗನ ಒಂದು ಕೋಟಿ ರೂಪಾಯಿ ಹಣವನ್ನು ಆಕೆಯ ಗಂಡ ಬಾಲಾಜಿ ಹೆಸರಿಗೆ ಬರೆಸಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ ಆಕೆ ನನ್ನ ಮೇಲೆ ಹಲ್ಲೆಯನ್ನೂ ನಡೆಸಿದ್ದು, ನನ್ನ ಕಾಲು ಮತ್ತು ಕೈಗೆ ಬಲವಾದ ಗಾಯವಾಗಿತ್ತು ಎಂದು ದೂರಿದ್ದಾರೆ.
ಲಭ್ಯ ಮಾಹಿತಿಗಳ ಪ್ರಕಾರ ಕುಟುಂಬ ಕಲಹದಿಂದ ಈ ವಿವಾದ ಎದ್ದಿದೆಯಂತೆ. ಕುಟುಂಬ ಸದಸ್ಯರು ಕೂಡಾ ಕಳೆದ ಬಾರಿಯಂತೆ ಈ ಬಾರಿಯೂ ಡಿಎಂಕೆ ಪಕ್ಷದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷ ಮತ್ತೆ ಅಳಾದಿ ಅರುಣಾ ಅವರಿಗೆ ಟಿಕೆಟ್ ನೀಡಿತ್ತು. ಈ ಕಾರಣದಿಂದ ತಾಯಿ ಮಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.
ಆದರೆ ತಾಯಿಯ ಈ ಆರೋಪ ಎಐಎಡಿಎಂಕೆಗೆ ಸಹಕಾರವಾಗುವ ಸಾಧ್ಯತೆಗಳಿದೆ ಅನ್ನುವ ಮಾತುಗಳು ಕೇಳಿ ಬಂದಿದೆ.
ಅಳಾದಿ ಅರುಣಾ ತಂದೆ ತಮಿಳುನಾಡಿನ ಹಿರಿಯ ರಾಜಕಾರಣಿಯಾಗಿದ್ದು, ಮೂರು ಬಾರಿ ಶಾಸಕರಾಗಿದ್ದರು ಆಯ್ಕೆಯಾಗಿದ್ದರು.2004ರಲ್ಲಿ ಅವರ ಕೊಲೆಯಾಗಿತ್ತು. ಹೀಗಾಗಿ 2006ರಲ್ಲಿ ನಡೆದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮಗಳು ಗೆಲುವು ಸಾಧಿಸಿದ್ದರು. 2011ರಲ್ಲಿ ಈ ಸೀಟನ್ನು ಎಐಎಡಿಎಂಕೆ ಕಸಿದು ಕೊಂಡಿತ್ತು. 2016ರಲ್ಲಿ ಮತ್ತೆ ಅಳಾದಿ ಅರುಣಾ ಗೆಲುವು ಸಾಧಿಸಿದ್ದರು.
Discussion about this post