ಬೆಂಗಳೂರು : ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 26 ರಿಂದ ಪದವಿ ಹಾಗೂ ಅದಕ್ಕಿಂತ ಮೇಲ್ಪಟ್ಟ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ನಡುವೆ ಆಗಸ್ಟ್ ಮೊದಲ ವಾರದಿಂದ ಹಂತ ಹಂತವಾಗಿ ಪಿಯು ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ಚಿಂತನೆಗಳು ನಡೆಯುತ್ತಿದೆ. ಮೂಲಗಳ ಪ್ರಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವುದೊಂದು ಬಾಕಿ ಇದೆ.
ಮೊದಲ ಅಲೆ ಅಂತ್ಯಗೊಂಡ ಸಂದರ್ಭದಲ್ಲಿ ಹಂತ ಹಂತವಾಗಿ ಶಾಲೆ, ಪಿಯು ಕಾಲೇಜುಗಳನ್ನು ಪ್ರಾರಂಭಿಸಲಾಗಿತ್ತು. ಅದೇ ರೀತಿ ಈ ಬಾರಿಯೂ ಮೊದಲು 10 ಹಾಗೂ 12ನೇ ತರಗತಿಗಳು ಪ್ರಾರಂಭವಾಗಲಿದೆ. ಇದಾದ ಬಳಿಕ 8,9 ಮತ್ತು 11ನೇ ತರಗತಿಗಳನ್ನು ಪ್ರಾರಂಭಿಸಲಾಗುವುದು. ಮೂರನೇ ಹಂತದಲ್ಲಿ 5,6,7ನೇ ತರಗತಿ ಮಕ್ಕಳಿಗೆ ಶಾಲಾ ಆವರಣದಲ್ಲಿ ವಿದ್ಯಾಗಮ ಪ್ರಾರಂಭಿಸಲಾಗುತ್ತದೆ.
ಅಷ್ಟು ಹೊತ್ತಿಗೆ ಆಗಸ್ಟ್ ಅಂತ್ಯ ಸಮೀಪಿಸುತ್ತದೆ.ಈ ವೇಳೆ ಮೂರನೇ ಅಲೆಯ ಲಕ್ಷಣಗಳನ್ನು ಗಮನಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಒಂದು ವೇಳೆ ಮೂರನೇ ಅಲೆ ಗೋಚರಿಸದಿದ್ರೆ 1 ರಿಂದ 4ನೇ ತರಗತಿ ಮಕ್ಕಳಿಗೂ ವಿದ್ಯಾಗಮ ಅಥವಾ ಭೌತಿಕ ತರಗತಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಇನ್ನು ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ, ಶಿಕ್ಷಣ ಇಲಾಖೆ ಆಯುಕ್ತ ವಿ ಅನ್ಭು ಕುಮಾರ್ ವರದಿಯನ್ನು ನಿರೀಕ್ಷಿಸಲಾಗುತ್ತದೆ. ಎರಡರಿಂದ ಮೂರು ದಿನಗಳಲ್ಲಿ ವರದಿ ಸಲ್ಲಿಕೆಯಾಗಲಿದ್ದು, ಬಳಿಕ ಸ್ಪಷ್ಟ ನಿರ್ಧಾರ ಹೊರ ಬೀಳಲಿದೆ. ಇದರೊಂದಿಗೆ ಜುಲೈ 26 ರಿಂದ ಕಾಲೇಜುಗಳ ಆರಂಭವಾದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
Discussion about this post