ಬೆಂಗಳೂರು : ಕೊರೋನಾ ಕಾರ್ಮೋಡ ಕರಗಿದ ಕಾರಣ 20 ತಿಂಗಳ ಬಳಿಕ 1 ರಿಂದ 5 ನೇ ತರಗತಿಗಳು ಇಂದಿನಿಂದ ಪ್ರಾರಂಭಗೊಂಡಿದೆ. ತರಗತಿಯ ಬಾಗಿಲು ತೆರೆದ ಕಾರಣ ಮಕ್ಕಳು ಉತ್ಸಾಹದಿಂದಲೇ ಭೌತಿಕ ತರಗತಿಗಳಿಗೆ ಆಗಮಿಸಿದ್ದು ಮಕ್ಕಳ ಕಲರವ ಕೇಳಿಸಿದೆ.
ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ 60 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಭೌತಿಕ ತರಗತಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿ 44,615 ಸರ್ಕಾರಿ ಮತ್ತು 19,645 ಖಾಸಗಿ ಪ್ರಾಥಮಿಕ ಶಾಲೆಗಳಿದ್ದು, 2021 -22 ರ ಸಾಲಿಗೆ 46,04 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಇನ್ನು ತರಗತಿಗಳನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, 2 ಡೋಸ್ ಲಸಿಕೆ ಪಡೆದ ಶಿಕ್ಷಕರು ಹಾಗೂ ಸಿಬ್ಬಂದಿ ಮಾತ್ರ ಶಾಲೆಗೆ ಬರಬೇಕು, ಶಿಕ್ಷಕರು ಕಡ್ಡಾಯವಾಗಿ ಫೇಸ್ ಶೀಲ್ಡ್ ಧರಿಸಬೇಕು. ಬ್ಯಾಚ್ ಆಧಾರದಲ್ಲಿ ತರಗತಿ ನಡೆಸಬೇಕು,ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ, ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಒಪನ್, ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ, ಪಾಸಿಟಿವಿಟಿ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ, ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ, 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಹೀಗೆ ಹತ್ತು ಹಲವು ನಿಯಮಗಳನ್ನು ಕೂಡಾ ಕಡ್ಡಾಯ ಮಾಡಲಾಗಿದೆ.
Discussion about this post